ಉಡುಪಿ ಅಷ್ಠ ಮಠದಲ್ಲಿ ಒಂದಾದ ಶೀರೂರು ಮಠದ ಪರ್ಯಾಯ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡು ಒಂದು ವಾರ ಕಳೆದರೂ, ಮಹೋತ್ಸವದ ಚಾಲನೆ ವೇಳೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಆರ್‌ಎಸ್‌ಎಸ್ ಧ್ವಜ ಹಿಡಿದು ಮೆರವಣಿಗೆಗೆ ಚಾಲನೆ ನೀಡಿದ ಘಟನೆ ಜಿಲ್ಲೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಪರ–ವಿರೋಧ ಅಭಿಪ್ರಾಯಗಳು ಮುಂದುವರಿದಿದ್ದು, ವಿಷಯ ರಾಜಕೀಯ ತೀವ್ರತೆ ಪಡೆದುಕೊಂಡಿದೆ.

ಜನವರಿ 18ರಂದು ಮುಂಜಾನೆ 3 ಗಂಟೆ ಸುಮಾರಿಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ಪರ್ಯಾಯ ಪುರಪ್ರವೇಶ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಆರ್‌ಎಸ್‌ಎಸ್ ಧ್ವಜವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರ ಕೈಗೆ ಹಸ್ತಾಂತರಿಸಿದ್ದು, ಜಿಲ್ಲಾಧಿಕಾರಿಯವರು ಅದನ್ನು ಮೇಲಕ್ಕೆ ಎತ್ತಿ ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಖಾಸಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಒಂದು ಸಂಘಟನೆಗೆ ಸೇರಿದ ಧ್ವಜವನ್ನು ಪ್ರದರ್ಶಿಸಿರುವುದು ಸಂವಿಧಾನದ ಧರ್ಮನಿರಪೇಕ್ಷ ತತ್ವ ಹಾಗೂ ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಕುರಿತಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವಿರುದ್ಧ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಉಡುಪಿಯ ಸಹಬಾಳ್ವೆ, ಪ್ರಧಾನ ಸಂಚಾಲಕರಾದ ಕೆ. ಫಣಿರಾಜ್, “ಜಿಲ್ಲಾಧಿಕಾರಿಯವರ ನಡೆ ಅಸಂವಿಧಾನಿಕ ಕೃತ್ಯ ಎಂದು ಖಂಡಿಸಿದ್ದು. ಸಾರ್ವಜನಿಕ ಕರ್ತವ್ಯ ನಿರ್ವಹಿಸುವಾಗ ಯಾವುದೇ ಸರ್ಕಾರಿ ಅಧಿಕಾರಿ ಧರ್ಮ ಅಥವಾ ರಾಜಕೀಯ ಸಂಘಟನೆಗೆ ಒಲವು ತೋರುವಂತೆ ವರ್ತಿಸಬಾರದು. ಯಾರೇ ಒತ್ತಡ ಹಾಕಿದ್ದರೂ ತಮ್ಮ ಸ್ಥಾನಮಾನದ ಘನತೆ ತೋರಿ ನಿರಾಕರಿಸಬೇಕಿತ್ತು. ಈ ರೀತಿಯ ನಡೆ ಜಿಲ್ಲೆಯ ಶಾಂತಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು, “ಪರ್ಯಾಯ ಉತ್ಸವ ಪ್ರತೀ ಎರಡು ವರ್ಷಕ್ಕೊಮ್ಮೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಈ ಬಾರಿ ಜಿಲ್ಲಾಧಿಕಾರಿಯವರ ನಡೆ ಗೊಂದಲ ಸೃಷ್ಟಿಸಿದೆ. ಆರು ಕೋಟಿ ರೂಪಾಯಿ ಅನುದಾನ ಪಡೆದರೂ ಮೂಲಭೂತ ರಸ್ತೆ ದುರಸ್ತಿ ಮಾಡದೆ ಯಶಸ್ಸು ಎಂದು ಹೇಳಿಕೊಳ್ಳುವುದು ಸರಿಯಲ್ಲ” ಎಂದು ಟೀಕಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ, ನಮ್ಮ ದೇಶಕ್ಕೆ ರಾಷ್ಟ್ರಧ್ವಜ ಹೊರತು ಬೇರೆ ಯಾವುದೇ ಧ್ವಜಗಳಿಲ್ಲ. ಜಿಲ್ಲಾಧಿಕಾರಿಯವರು ಸರ್ಕಾರದ ಪ್ರತಿನಿಧಿ ಎಂಬುದನ್ನು ಮರೆತಂತೆ ವರ್ತಿಸಿದ್ದಾರೆ. ಮತ್ತು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರು ಮತಗಳಿಗಾಗಿ ಜನರನ್ನು ತಪ್ಪು ದಾರಿಗೆ ತಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಉಡುಪಿ ನಗರಸಭೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಹಿನ್ನಲೆಯಲ್ಲಿ ನಾಗರಿಕ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೆನೆ ಹೊರತು, ಯಾವುದೇ ರಾಜಕೀಯ ಅಥವಾ ಸಂಘಟನಾ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನೂತನ ಯತಿಗಳಿಗೆ ಪೌರ ಸನ್ಮಾನ ಹಾಗೂ ದರ್ಬಾರ್ ಕಾರ್ಯಕ್ರಮದಲ್ಲೂ ಆಡಳಿತದ ಪರವಾಗಿ ಭಾಗವಹಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಜಿಲ್ಲಾಧಿಕಾರಿಯವರ ಪರವಾಗಿ ನಿಂತು, “ಇದು ಭಗವಾಧ್ವಜ. ಹಿಂದಿನ ಪರ್ಯಾಯಗಳಲ್ಲಿಯೂ ಜಿಲ್ಲಾಧಿಕಾರಿಗಳು ಇದೇ ಧ್ವಜದ ಮೂಲಕ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ಇದನ್ನು ರಾಜಕೀಯಗೊಳಿಸುತ್ತಿದೆ. ಪರ್ಯಾಯ ಮಹೋತ್ಸವಕ್ಕೆ ಬಿಡುಗಡೆಯಾದ ಆರು ಕೋಟಿ ರೂಪಾಯಿಗಳ ಲೆಕ್ಕವನ್ನು ಮೊದಲು ಕಾಂಗ್ರೆಸ್ ನೀಡಲಿ” ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಟೀಕೆಗಳನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಒಟ್ಟಾರೆ, ಪರ್ಯಾಯ ಮಹೋತ್ಸವದ ಚಾಲನೆ ವೇಳೆ ನಡೆದ ಈ ಘಟನೆಯು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರ, ಸಂವಿಧಾನಿಕ ಮಿತಿಗಳು ಹಾಗೂ ಧರ್ಮನಿರಪೇಕ್ಷತೆಯ ಪ್ರಶ್ನೆಗಳನ್ನು ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿಸಿದೆ. ಜಿಲ್ಲೆಯಲ್ಲಿ ಈ ವಿಷಯ ಇನ್ನಷ್ಟು ರಾಜಕೀಯ ಬಣ್ಣ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ





