ಉಡುಪಿ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಂದಿನಿಂದ ಜೂನ್‌ನ ಮುಂಗಾರು ಮಳೆ ಆರಂಭ ಆಗುವವರೆಗೆ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರದೇಶಗಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ತಾಲೂಕುವಾರು ನೀಡಿರುವ ವರದಿ ಆನ್ವಯ ಮುಂದಿನ ಮೇ 15 ರ ವರೆಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ, ಆದರೂ ಸಹ ಈಗಿನಿಂದಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ನೀರನ್ನು ಸರಬರಾಜಿಗೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ತಾಲೂಕು ತಹಶೀಲ್ದಾರ್ ಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಮುಂಬರುವ ದಿನಗಳಲ್ಲಿ ಕಾರ್ಕಳದ 14, ಕುಂದಾಪುರದ 36, ಬೈಂದೂರಿನ 15, ಉಡುಪಿಯ 9, ಬ್ರಹ್ಮಾವರದ 13, ಕಾಪುವಿನ 4 ಹಾಗೂ ಹೆಬ್ರಿ ತಾಲೂಕಿನಲ್ಲಿ 2 ಗ್ರಾಮ ಪಂಚಾಯತ್ ಗಳಲ್ಲಿ ಮತ್ತು ಸಾಲಿಗ್ರಾಮದ 5 ಹಾಗೂ ಬೈಂದೂರಿನ 19 ವಾರ್ಡ್ಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳಿರುವುದಾಗಿ ಗುರುತಿಸಲಾಗಿದ್ದು, ಪ್ರಸ್ತುತ ನೀಡುತ್ತಿರುವ ನೀರಿನ ಮೂಲಗಳು ಎಷ್ಟು ದಿನಗಳು ಬರುತ್ತವೆ ಎಂಬ ಬಗ್ಗೆ ಎರಡು ದಿನಗಳ ಒಳಗಾಗಿ ಪರಿಶೀಲಿಸಿ ವರದಿ ನೀಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದ ಅವರು, ಒಂದೊಮ್ಮೆ ನೀರಿನ ಕೊರತೆ ಕಂಡುಬAದಲ್ಲಿ ಹತ್ತಿರದ ಖಾಸಗಿ ಬಾವಿಗಳನ್ನು ಗುರುತಿಸಿ ಇಟ್ಟುಕೊಂಡು ತಕ್ಷಣಕ್ಕೆ ನೀರು ನೀಡಲು ಸನ್ನದ್ಧರಾಗಿರುವುದರೊಂದಿಗೆ ಜನರಿಗೆ ಸಮಸ್ಯೆ ಆಗದೆ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು.

ಸರಕಾರಿ ಬಾವಿಗಳು, ಕೆರೆಗಳು ಸ್ವಚ್ಛವಾಗಿಟ್ಟು ಕೊಳ್ಳುವುದರೊಂದಿಗೆ ಪ್ರಾಣಿ, ಪಕ್ಷಿಗಳಿಗೆ ನೀರನ್ನು ಕುಡಿಯಲು ಅನುಕೂಲ ಮಾಡಿಕೊಡಬೇಕು. ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಕರೆದು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಗಳು ಉಂಟಾಗದಂತೆ ಕಂಡು ಕೊಳ್ಳಬಹುದಾದ ಕ್ರಮಗಳನ್ನು ಚರ್ಚಿಸಿ, ಯೋಜನೆಯನ್ನು ರೂಪಿಸಬೇಕು ಎಂದರು.
ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ದನಕಾರುಗಳಿಗೆ ಮೇವಿನ ಕೊರತೆ ಕಂಡು ಬಂದಿಲ್ಲ. ಪ್ರಸ್ತುತ ಎಲ್ಲಾ ತಾಲೂಕುಗಳಲ್ಲಿ ಮುಂದಿನ 38 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ ಎಂದರು.
ಬೇಸಿಗೆ ದಿನಗಳಲ್ಲಿ ಅಗ್ನಿ ಅನಾಹುತಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಅಗ್ನಿ ಅನಾಹುತಗಳು ಉಂಟಾದಲ್ಲಿ ಕೂಡಲೇ ಸ್ಪಂದಿಸಲು ಸನ್ನದ್ಧರಾಗಿರಬೇಕು.. ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್ ಮಾಡುವುದರೊಂದಿಗೆ ವರದಿಯನ್ನು ನೀಡಬೇಕು ಎಂದು ಅಗ್ನಿ ಶಾಮಕ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಅರಣ್ಯ ಪ್ರದೇಶಗಳಲ್ಲಿ ಅಗ್ನಿ ಅನಾಹುತಗಳು ಉಂಟಾಗಬಹುದು, ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಅತೀ ಹೆಚ್ಚು ತಾಪಮಾನ ದಿಂದ ಉಂಟಾಗುವ ಅರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಔಷಧಿಗಳನ್ನು ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಓ.ಆರ್.ಎಸ್ ಪ್ಯಾಕೇಟ್‌ಗಳನ್ನು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದ ಅವರು, ಜನರು ಸಾಧ್ಯವಾದಷ್ಟು ಗರಿಷ್ಠ ತಾಪಮಾನದ ಅವಧಿ ಅಂದರೆ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು ಹಾಗೂ ಹಗುರವಾದ ತಿಳಿ ಬಣ್ಣದ ಸಡಿಲವಾದ ಹತ್ತಿಬಟ್ಟೆಗಳನ್ನು ಧರಿಸಬೇಕು ಎಂದರು.
ಪೂರ್ವ ಮುಂಗಾರು ಮಳೆಗಾಲದಲ್ಲಿ ಗುಡುಗು, ಸಿಡಿಲುಗಳಿಂದ ಅಪಾಯಗಳನ್ನ ತಪ್ಪಿಸಲು ತೆಗೆದುಕೊಳ್ಳಬಹುದಾದ ಮುಂಜಾಗ್ರತ ಕ್ರಮಗಳನ್ನು ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವುದರೊಂದಿಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್ ಕಾದ್ರೋಳ್ಳಿ, ಸಹಾಯಕ ಕಮಿಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.





