ಗ್ಯಾಸ್ ಸಿಲಿಂಡರ್ ಕೊರತೆ ಎಂಬ ಭೀತಿಯನ್ನು ಬಂಡವಾಳ ಮಾಡಿಕೊಂಡು ಸೈಬರ್ ವಂಚಕರು ಜನರನ್ನು ಗುರಿಯಾಗಿಸಿಕೊಂಡಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸಾರ್ವಜನಿಕರಲ್ಲಿ ಎಚ್ಚರಿಕೆ ನೀಡಿದ್ದಾರೆ.
ಗ್ಯಾಸ್ ಬುಕ್ಕಿಂಗ್ ಅಥವಾ ಕೆವೈಸಿ (KYC) ಅಪ್ಡೇಟ್ ಹೆಸರಿನಲ್ಲಿ ಅಪರಿಚಿತರಿಂದ ಲಿಂಕ್‌ಗಳು ಹಾಗೂ ಎಪಿಕೆ (APK) ಫೈಲ್‌ಗಳನ್ನು ಕಳುಹಿಸಿ ಹಣ ದೋಚುವ ಯತ್ನ ನಡೆಯುತ್ತಿದೆ. ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು ಅಪಾಯಕಾರಿಯಾಗಿದ್ದು, ಬ್ಯಾಂಕ್ ವಿವರಗಳು ಹಾಗೂ ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಈ ರೀತಿಯ ವಂಚನೆಗೆ ಒಳಗಾಗಿ ಈಗಾಗಲೇ ಉಡುಪಿ ಜಿಲ್ಲೆಯ ಇಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವುದು ವರದಿಯಾಗಿದೆ.
ಸಾರ್ವಜನಿಕರು ಯಾವುದೇ ಅಪರಿಚಿತ ಕರೆ, ಸಂದೇಶ ಅಥವಾ ಲಿಂಕ್‌ಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಅಧಿಕೃತ ವೆಬ್‌ಸೈಟ್ ಅಥವಾ ಗ್ಯಾಸ್ ಏಜೆನ್ಸಿಗಳ ಮೂಲಕವೇ ಬುಕ್ಕಿಂಗ್ ಮತ್ತು ಕೆವೈಸಿ ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಎಸ್ಪಿ ಮನವಿ ಮಾಡಿದ್ದಾರೆ.






