ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕರ್ನಾಟಕ ನೀರಾವರಿ ನಿಗಮವು ಗುತ್ತಿಗೆದಾರರಿಗೆ ಸೂಚನೆ ನೀಡಿದೆ. ಜಾಕ್‌ವೆಲ್ ನಿರ್ಮಾಣ ಸ್ಥಳ ಬದಲಾವಣೆ ಸಂಬಂಧ ಅಧ್ಯಯನ ನಡೆಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಇದು ರೈತ ವಿರೋಧಿ ಕ್ರಮವೆಂದು ಉಡುಪಿ ಜಿಲ್ಲಾ ರೈತ ಸಂಘ ಸೇರಿದಂತೆ ವಿವಿಧ ರೈತ ಸಂಘಟನೆಗಳು ಆರೋಪಿಸಿವೆ. ಯೋಜನೆಯ ಅನುಷ್ಠಾನಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಸಿದ್ದಾಪುರ ಏತ ನೀರಾವರಿ ಯೋಜನೆ ಕುರಿತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ಹಾಗೂ ಸಂಘರ್ಷ ನಡೆಯುತ್ತಿದೆ. ಸಿದ್ದಾಪುರ ಭಾಗದ ರೈತರು ಹಾಗೂ ವಾರಾಹಿ ನದಿ ಕೆಳಭಾಗದ ರೈತರು ತಮ್ಮ ತಮ್ಮ ವಾದಗಳನ್ನು ಮುಂದಿಟ್ಟಿದ್ದಾರೆ. ಹೊರಿಯಬ್ಬೆ ಮೂಲ ಡ್ಯಾಂನಿಂದ ಈಗಾಗಲೇ ವಿವಿಧ ಯೋಜನೆಗಳಿಗೆ ನೀರು ಬಳಕೆ ಆಗುತ್ತಿರುವುದರಿಂದ, ಮತ್ತೆ ಏತ ನೀರಾವರಿಗೂ ಮೇಲ್ಭಾಗದಿಂದ ನೀರು ತೆಗೆದರೆ ಭವಿಷ್ಯದಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂಬ ಆತಂಕವನ್ನು ಕೆಲ ರೈತರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ 600 ಮೀಟರ್ ಕೆಳಭಾಗದಲ್ಲಿ ಜಾಕ್‌ವೆಲ್ ನಿರ್ಮಿಸುವಂತೆ ಅವರು ಆಗ್ರಹಿಸಿದ್ದಾರೆ.

ಈ ಹಿಂದೆ ವಾರಾಹಿ ಡೈವರ್ಷನ್ ವಿಯರ್ ಮೇಲ್ಭಾಗದಲ್ಲಿ ಜಾಕ್‌ವೆಲ್ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳ ಕಚೇರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಪತ್ರದ ಅನ್ವಯ, ಜಾಕ್‌ವೆಲ್ ಅನ್ನು ನದಿ ಪಾತ್ರದ ಸುಮಾರು 600 ಮೀಟರ್ ಕೆಳಭಾಗದಲ್ಲಿ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳ ಬದಲಾವಣೆಯ ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಾಂತ್ರಿಕ ಪರಿಣಿತರ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯು ಮುಂದಿನ 15 ದಿನಗಳೊಳಗಾಗಿ ಸ್ಥಳ ಪರಿವೀಕ್ಷಣೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕಾಗಿದೆ.
ಈ ಅಧ್ಯಯನ ಪೂರ್ಣಗೊಳ್ಳುವವರೆಗೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ವ್ಯವಸ್ಥಾಪಕ ನಿರ್ದೇಶಕರು, ತುಂಗಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ಗೆ ಮೌಖಿಕವಾಗಿ ನಿರ್ದೇಶಿಸಿದ್ದರು. ಅದರಂತೆ ಸಿದ್ದಾಪುರದ ವಾರಾಹಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಪಾಲಕ ಅಭಿಯಂತರರು ಕಾಮಗಾರಿ ಸ್ಥಗಿತ ಆದೇಶ ಹೊರಡಿಸಿದ್ದಾರೆ.

ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಗಿತವನ್ನು ರೈತ ವಿರೋಧಿ ಕ್ರಮವೆಂದು ಉಡುಪಿ ಜಿಲ್ಲಾ ರೈತ ಸಂಘ (ರಿ.) ಸೇರಿದಂತೆ ವಿವಿಧ ಸಂಘಟನೆಗಳು ಆರೋಪಿಸಿವೆ. ಯೋಜನೆಯ ಅನುಷ್ಠಾನಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆ ಸಿದ್ದಾಪುರ ಏತ ನೀರಾವರಿ ವ್ಯಾಪ್ತಿಯ ರೈತರು, ಉಡುಪಿ ಜಿಲ್ಲಾ ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜನವರಿ 21ರ ಬುಧವಾರದಂದು ಸಿದ್ದಾಪುರ ಸರ್ಕಲ್ ಬಳಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯ ಶ್ರವಣ್ ಶೆಟ್ಟಿ, “ಸಿದ್ದಾಪುರ ಏತ ನೀರಾವರಿ ಯೋಜನೆಯ ಸುಮಾರು ಶೇ.60ರಷ್ಟು ಕೆಲಸ ಪೂರ್ಣಗೊಂಡಿದ್ದರೂ ಸರ್ಕಾರ ಇದೀಗ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿದಿಲ್ಲ. ಈ ನಿರ್ಧಾರದಿಂದ ರೈತರಿಗೆ ಗಂಭೀರ ಸಮಸ್ಯೆಗಳು ಉಂಟಾಗಲಿದ್ದು, ಅದನ್ನು ವಿರೋಧಿಸಿ ರೈತರು ಹಾಗೂ ಸ್ಥಳೀಯರು ಒಂದಾಗಿ ಜನಾಗ್ರಹ ಸಭೆ ನಡೆಸಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.

ವಾರಾಹಿ ಯೋಜನೆಯ ಹಿನ್ನೆಲೆ:
1979ರಲ್ಲಿ ಆರಂಭಗೊಂಡ ವಾರಾಹಿ ನೀರಾವರಿ ಯೋಜನೆ, ವಾರಾಹಿ ಅಚ್ಚುಕಟ್ಟು ಪ್ರದೇಶದ ಸುಮಾರು 38,800 ಎಕರೆ ಕೃಷಿಭೂಮಿಗೆ ನೀರುಣಿಸುವ ಉದ್ದೇಶ ಹೊಂದಿತ್ತು. ಕಾಲಕ್ರಮೇಣ ಈ ಯೋಜನೆಯ ನೀರು ಕರಾವಳಿ ಭಾಗದ ಕುಡಿಯುವ ನೀರಿನ ಅಗತ್ಯಕ್ಕೂ ಬಳಕೆಯಾಗುತ್ತಿದೆ. ಕುಂದಾಪುರ ನಗರ ಮತ್ತು ಅದರ ಹಾದಿಯಲ್ಲಿರುವ ಐದು ಗ್ರಾಮಗಳು, ಉಡುಪಿ ನಗರ ಹಾಗೂ ಅದರ ಸುತ್ತಲಿನ ಸುಮಾರು ಹತ್ತು ಗ್ರಾಮಗಳು, ಕಾರ್ಕಳ, ಕಾಪು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ವಾರಾಹಿ ನೀರು ಸರಬರಾಜಾಗುತ್ತಿದೆ.
ಸೀತಾ, ಸ್ವರ್ಣ, ಮಡಿಸಾಲು ನದಿಗಳಲ್ಲಿ ನೀರಿರುವ ಹೊರತಾಗಿಯೂ ವಾರಾಹಿ ನೀರಿನ ಅವಲಂಬನೆ ಹೆಚ್ಚಾಗಿದೆ. ಇದಕ್ಕೆ ಅಚ್ಚುಕಟ್ಟು ಪ್ರದೇಶದ ರೈತರು ಇದುವರೆಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಜಿಲ್ಲೆಯಿಂದ ಹೊರಗೆ, ಬೆಳ್ತಂಗಡಿಯವರೆಗೆ ವಾರಾಹಿ ನೀರನ್ನು ಒಯ್ಯುವ ಚರ್ಚೆಗಳು ನಡೆಯುತ್ತಿರುವುದು ರೈತ ವಲಯದಲ್ಲಿ ಆತಂಕ ಮೂಡಿಸಿದೆ.

ಸಿದ್ದಾಪುರ ಏತ ನೀರಾವರಿ ಯೋಜನೆ ವಿವರ:
ವಾರಾಹಿ ಬಲದಂಡೆ ಕಾಲುವೆಯ ಬಲಭಾಗದಲ್ಲಿರುವ ಸಿದ್ದಾಪುರ, ಅಂಪಾರು, ಆದ್ರೆ, ಕೊಡ್ಲಾಡಿ, ಕರ್ಕುಂಜೆ ಹಾಗೂ ಹೊಸಂಗಡಿ ಗ್ರಾಮಗಳ ಸುಮಾರು 1200 ಹೆಕ್ಟೇರ್ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಸಿದ್ದಾಪುರ ಏತ ನೀರಾವರಿ ಯೋಜನೆ ರೂಪಿಸಲಾಗಿದೆ. ನೀರಿನ ಲಭ್ಯತೆ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದ ಬಳಿಕ, ವಾರಾಹಿ ಡೈವರ್ಷನ್ ವಿಯರ್ ಮೇಲ್ಭಾಗದಲ್ಲಿ ಜಾಕ್‌ವೆಲ್–ಪಂಪ್ ಹೌಸ್ ನಿರ್ಮಿಸಿ ಏರುಕೊಳವೆಗಳ ಮೂಲಕ ನೀರು ಹರಿಸುವ 165 ಕೋಟಿ ರೂ. ಯೋಜನೆಗೆ ಮಂಜೂರಾತಿ ದೊರೆತಿತ್ತು.
ಕಾಮಗಾರಿ ಆರಂಭಗೊಂಡ ಬಳಿಕ, ಜಾಕ್‌ವೆಲ್ ಅನ್ನು ಹೊರಿಯಬ್ಬೆ ಡ್ಯಾಂನ ಮೇಲ್ಭಾಗದ ಬದಲು ಕೆಳಭಾಗದಲ್ಲಿ, ಹೊಳೆ ಶಂಕರನಾರಾಯಣ ದೇವಸ್ಥಾನದ ಬಳಿ ನಿರ್ಮಿಸಬೇಕು ಎಂಬ ಆಕ್ಷೇಪಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಸ್ಪಂದನೆ ದೊರೆತಿದ್ದು, ತಾಂತ್ರಿಕ ಪರಿಶೀಲನೆಗೆ ಆದೇಶಿಸಲಾಗಿದೆ.
ಖಾಸಗಿ ಜಲವಿದ್ಯುತ್ ಯೋಜನೆ ಕುರಿತು ಆರೋಪ:
ವಾರಾಹಿ ಡೈವರ್ಷನ್ ವಿಯರ್ ಎಡಭಾಗದಲ್ಲಿ 12 ಮೆಗಾವ್ಯಾಟ್ ಸಾಮರ್ಥ್ಯದ ಖಾಸಗಿ ಕಿರು ಜಲವಿದ್ಯುತ್ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಹೊರಿಯಬ್ಬೆ ಅಣೆಕಟ್ಟಿನಿಂದ ನೀರು ಹೊಳೆಯ ಮೂಲಕ ಹರಿದರೆ ಈ ಯೋಜನೆಗೆ ಲಾಭವಾಗಲಿದೆ ಎಂಬ ಆರೋಪಗಳು ರೈತ ಸಂಘಟನೆಗಳಿಂದ ಕೇಳಿಬರುತ್ತಿವೆ.
ಹೊರಿಯಬ್ಬೆ ಅಣೆಕಟ್ಟಿನಲ್ಲಿ ಹತ್ತು ದಿನಗಳಿಗಾಗುವಷ್ಟು ನೀರಿನ ಸಂಗ್ರಹವಿದ್ದು, ವಾರಾಹಿ ಭೂಗರ್ಭ ವಿದ್ಯುತ್ ಘಟಕದಿಂದ ದಿನಂಪ್ರತಿ 4000ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಡೈವರ್ಷನ್ ವಿಯರ್‌ಗೆ ಹರಿದುಬರುತ್ತದೆ. ಆದರೆ ವಾರಾಹಿಯ ಎಡದಂಡೆ, ಬಲದಂಡೆ ಹಾಗೂ ಏತ ನೀರಾವರಿ ಯೋಜನೆಗಳಿಗೆ ಅಗತ್ಯವಿರುವುದು ಸುಮಾರು 1100 ಕ್ಯೂಸೆಕ್ಸ್ ನೀರು ಮಾತ್ರ ಎನ್ನಲಾಗಿದೆ. ಈ ನೀರು ನೇರವಾಗಿ ಕಾಲುವೆಗಳಿಗೆ ಹರಿದರೆ ರೈತರಿಗೆ ಲಾಭವಾಗುತ್ತದೆ ಎಂಬ ವಾದ ಮುಂದಿಡಲಾಗಿದೆ.
ಒಟ್ಟಿನಲ್ಲಿ, ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ತಾತ್ಕಾಲಿಕ ಸ್ಥಗಿತವು ತಾಂತ್ರಿಕ ಅಧ್ಯಯನದ ಹೆಸರಿನಲ್ಲಿ ಕೈಗೊಳ್ಳಲಾದ ಕ್ರಮವಾದರೂ, ಇದರ ಪರಿಣಾಮವಾಗಿ ರೈತ ವಲಯದಲ್ಲಿ ಗಂಭೀರ ಆತಂಕ ಮತ್ತು ಅಸಮಾಧಾನ ಉಂಟಾಗಿದೆ. ಯೋಜನೆ ವಿಳಂಬವಾಗುವುದರಿಂದ ಕೃಷಿ ಚಟುವಟಿಕೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದಾಗಿ ರೈತರು ಎಚ್ಚರಿಕೆ ನೀಡಿದ್ದು, ಸರ್ಕಾರವು ತ್ವರಿತವಾಗಿ ಅಧ್ಯಯನ ಪೂರ್ಣಗೊಳಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆಯಲಿರುವ ಜನಾಗ್ರಹ ಸಭೆ, ಮುಂದಿನ ಹೋರಾಟದ ದಿಕ್ಕು ನಿರ್ಧರಿಸುವ ಮಹತ್ವದ ವೇದಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.


ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




