ಸಮಾಧಾನ ಮಹೋತ್ಸವ ಹೃದಯಗಳ ಪರಿವರ್ತನೆ, ನಂಬಿಕೆಯ ನವೀಕರಣ ಮತ್ತು ಶಾಂತಿಯ ಅನುಭವಕ್ಕೆ ದೇವರು ನೀಡಿದ ಅಪೂರ್ವ ಅವಕಾಶ ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೆಷೀತ ಆಡಳಿತಾಧಿಕಾರಿ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಮಿಷನ್ ಕಂಪೌಂಡ್ ಮೈದಾನದಲ್ಲಿ ಉಡುಪಿ ಜಿಲ್ಲೆಯ ಫೆಲೋಶಿಪ್ ಚರ್ಚಸ್ ಇವರ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಸಮಾಧಾನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೈಬಲ್ ಶ್ರೀಗಂಥ ಪ್ರತಿಯೊಬ್ಬರಿಗೂ ಶಾಂತಿಯ ಆಳವಾದ ಅರ್ಥವನ್ನು ಭೋಧಿಸುತ್ತದೆ ಯೇಸು ಸ್ವಾಮಿಯ ಜನನದ ಸಂದರ್ಭದಲ್ಲಿ ಕೂಡ ಶಾಂತಿ ಸಮಾಧಾನದ ಉಲ್ಲೇಖವಿದ್ದು ಇದರು ದೇವರು ಮಾನವ ಕುಲದ ಮೇಲೆ ತೋರಿದ ಪ್ರೀತಿಯ ಸಂಕೇತವಾಗಿದೆ. ಲೋಕದ ಶಾಂತಿ ತಾತ್ಕಾಲಿಕವಾದರೆ ಕ್ರಿಸ್ತನ ಶಾಂತಿ ಶಾಶ್ವತವಾದುದಾಗಿದೆ. ಆದ್ದರಿಂದ ಶಾಂತಿಗಾಗಿ ಶ್ರಮಿಸವವರು ಸದಾ ಧನ್ಯರು ಎಂದು ಯೇಸು ಸ್ವಾಮಿ ಹೇಳಿದ್ದು ಅವರ ಸಂದೇಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಪಾಲಿಸೋಣ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ ಪ್ರತಿಯೊಂದು ಧರ್ಮಗಳಿಗೂ ತಮ್ಮ ತಮ್ಮ ಆಚರಣೆಗಳಿಗೆ ದೇಶದಲ್ಲಿ ಮುಕ್ತ ಅವಕಾಶವಿದ್ದು ನಮ್ಮ ಧರ್ಮವನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಿದಾಗ ಶಾಂತಿಯ ಸಂದೇಶ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.
ಸಿಎಸ್ ಐ ಕರ್ನಾಟಕ ಸದರ್ನ್ ಡಯಾಸಿಸ್ ಇದರ ಧರ್ಮಾಧ್ಯಕ್ಷರಾದ ಅತಿ ವಂ|ಹೇಮಚಂದ್ರ ಕುಮಾರ್ ಮಾತನಾಡಿ ಮೂರು ದಿನಗಳ ಸಮಾಧಾನ ಮಹೋತ್ಸವ ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಬಲಗೊಳಿಸಲು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೂ ಮುನ್ನ ಸುಮಾರು 200ಕ್ಕೂ ಅಧಿಕ ಮಂದಿ ಗಾಯನ ತಂಡದ ನೇತೃತ್ವದಲ್ಲಿ ಸ್ತುತಿಗೀತೆಗಳ ಗಾಯನ ಜರುಗಿತು.
ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭಕ್ತಿ ಸಂಜೀವನ ಕೂಟಗಳನ್ನು ನಡೆಸಿಕೊಡಲಿರುವ ಘನ ಮೋಹನ್ ಸಿ.ಲಾಝರಸ್, ಪಾಸ್ಟರ್ ಟಿ ವಿ ಗೋಪಿನಾಥನ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರಶಾಂತ್ ಜತ್ತನ್ನ ವೇದಿಕೆಯಲ್ಲಿ ಉಪಸ್ಥಿತರದ್ದರು.

ಉಡುಪಿ ನಗರದ ಮಿಷನ್ ಕಾಂಪೌಂಡ್‌ನಲ್ಲಿ ಮಾರ್ಚ್ 20ರಿಂದ 22ರವರೆಗೆ ಆಯೋಜಿಸಲಾಗಿರುವ ಮೂರು ದಿನಗಳ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಶುಕ್ರವಾರದಂದು ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಮಾವೇಶಗೊಂಡ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು, ಸಮಾಧಾನ ಮಹೋತ್ಸವದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಬಳಿಕ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿರುವ ಮಿಷನ್ ಕಾಂಪೌಂಡ್ ಮೈದಾನಕ್ಕೆ ಮುತ್ತಿಗೆ ಹಾಕಲು ಮೆರವಣಿಗೆಯ ಮೂಲಕ ತೆರಳಲು ಯತ್ನಿಸಿದರು.
ಪ್ರತಿಭಟನಾಕಾರರು ಮೈದಾನದ ಕಡೆಗೆ ನುಗ್ಗದಂತೆ ತಡೆದ ಪೊಲೀಸರು, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಬಳಿಕ ಅವರನ್ನು ಮಣಿಪಾಲ ಪೊಲೀಸ್ ಠಾಣೆಗೆ ಕರೆದೊಯ್ದು, ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಮಿಷನ್ ಕಾಂಪೌಂಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ





