ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಪೊಲೀಸರ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ಮಾಡಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ಮಂಗಳ ಪ್ರದೇಶದಲ್ಲಿ ನಡೆದಿದೆ.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ಪ್ರಕಾರ, ಕೇರಳದ ಕಾಸರಗೋಡು ಮೂಲದ ಅಬ್ದುಲ್ಲಾ ಎಂಬಾತ ಐಚರ್ ವಾಹನದಲ್ಲಿ 10 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಆತನು ವೇಗವನ್ನು ಕಡಿಮೆ ಮಾಡದೆ, ಸುಮಾರು 10 ಕಿಲೋಮೀಟರ್ ದೂರ ಪೊಲೀಸರನ್ನು ಬೆನ್ನಟ್ಟುವಂತೆ ಮಾಡಿದ.
ಈ ವೇಳೆ ಆರೋಪಿ ಅಬ್ದುಲ್ಲಾ ಪೊಲೀಸರ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆಯತ್ನ ನಡೆಸಿದ್ದಾನೆ. ಪ್ರತಿಯಾಗಿ ಪಿಎಸ್ಐ ರವರು ಆತ್ಮರಕ್ಷಣೆಯ ದೃಷ್ಟಿಯಿಂದ ಎರಡು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಒಂದು ಗುಂಡು ಐಚರ್ ವಾಹನದ ಮೇಲೆ, ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು
ಘಟನೆಯ ವೇಳೆ ವಾಹನದಲ್ಲಿದ್ದ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಅಬ್ದುಲ್ಲನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಹೇಳುವಂತೆ, ಈ ಅಬ್ದುಲ್ಲನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿಯೂ 33/2025ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.





