ಭಾರತದ ಸಾಂಸ್ಕೃತಿಕ ಸಂಕಥನಗಳು ಮತ್ತು ಸಾಂಸ್ಕೃತಿಕ ರಾಜಕಾರಣ ಬಲಿ ಚಕ್ರವರ್ತಿಯನ್ನು ಪುರಾಣ ಹಾಗೂ ಕೆಟ್ಟವ್ಯಕ್ತಿ ಎಂಬುದಾಗಿ ಬಿಂಬಿಸಲು ಸಾಕಷ್ಟು ಶ್ರಮಿಸಿವೆ. ಆದರೆ ದಕ್ಷಿಣ ಏಷ್ಯಾದ ಮೂಲ ನಿವಾಸಿಗಳಿಗೆ ಅವರ ಸಾಂಸ್ಕೃತಿಕ ಅಸ್ಮಿತೆ ಮತ್ತು ಜನಾಂಗದ ಭಾಗವಾಗಿಯೇ ಬಲಿ ಚಕ್ರವರ್ತಿ ಉಳಿದುಕೊಂಡಿರುವುದನ್ನು ನಾವು ಕಂಡುಕೊಳ್ಳಬಹುದು.
ಮೈಸೂರು ಸಾಂಸ್ಕೃತಿಕ ನಗರ, ವಿಶ್ವವಿಖ್ಯಾತಿ ಹೊಂದಿದ ನಗರ. ಮೈಸೂರಷ್ಟೇ ಅಲ್ಲದೇ ಜಿಲ್ಲಾದ್ಯಂತ ಒಂದಲ್ಲಾ ಒಂದು ರೀತಿಯ ಇತಿಹಾಸ, ಗತವೈಭವ ಹೊಂದಿರುವ ಜಿಲ್ಲೆ. ಇಂತಹ ಜಿಲ್ಲೆಯ ಹೆಗ್ಗಡದೇವನಕೊಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ಬಲಿಪಾಡ್ಯಮಿಯಂದು ಹೊಲಯ ಸಮುದಾಯದ ಜತೆಗೆ ಬೆಸೆದುಕೊಂಡ ಸಾಂಸ್ಕೃತಿಕ ಕಥನವೇ ‘ಬಲಿ ಚಕ್ರವರ್ತಿ ಚಟ್ಟ’ ತೋರಣ.
ಹೆಗ್ಗಡದೇವನಕೋಟೆ ವನಸಿರಿ ನಾಡು, ಹುಲಿಗಳ ನಾಡು ಎಂತಲೂ ಕರೆಯುವುದುಂಟು. ವನ್ಯಜೀವಿಗಳ ಆವಾಸ ಸ್ಥಾನ. ಪ್ರಮುಖವಾಗಿ ದಟ್ಟವಾದ ಕಾಕನಕೋಟೆ ಅರಣ್ಯವಿದೆ. ತಾಲೂಕಿನಲ್ಲಿ ನುಗು, ಕಬಿನಿ, ತಾರಕ ಜಾಲಾಶಯಗಳಿವೆ. ಬೆಟ್ಟಗುಡ್ಡಗಳಿಂದ ಸುತ್ತುವರೆದಿರುವುದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇತ್ತೀಚಿಗೆ ಹೆಗ್ಗಡಕೋಟೆ ತಾಲೂಕನ್ನು ವಿಭಜಿಸಿ ಸರಗೂರು ಪಟ್ಟಣವನ್ನು ಹೊಸ ತಾಲೂಕನ್ನಾಗಿ ಮಾಡಲಾಗಿದೆ.

ಹೆಗ್ಗಡದೇವನಕೊಟೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೇ ಹೆಚ್ಚಾಗಿದ್ದು, ಆದಿವಾಸಿ, ಬುಡಕಟ್ಟು ಜನರ ಹಾಡಿಗಳಿವೆ. ಸುಂದರವಾದ ಪರಿಸರ ಹೊಂದಿರುವ ತಾಲೂಕಿನಲ್ಲಿ ಹೊಲೆಯ ಸಮುದಾಯದವರ ‘ಬಲಿ ಚಕ್ರವರ್ತಿ ಚಟ್ಟ’ ತೋರಣ ಆಚರಣೆ ಭಿನ್ನವಾದದ್ದು. ಆದರೆ ಹೊರ ಜಗತ್ತಿಗೆ ಈ ಆಚರಣೆ ಅಷ್ಟಾಗಿ ಗೋಚರಿಸಿಲ್ಲ.
ದೀಪಾವಳಿಯ ಬಲಿಪಾಡ್ಯಮಿ ಅಮಾವಸ್ಯೆ ದಿನದಂದು ಹೆಗ್ಗಡದೇವನಕೋಟೆ ತಾಲೂಕಿನ ಎಂ ಕನ್ನೇನಹಳ್ಳಿ, ಹಾದನೂರು, ಕೆಂಚನಹಳ್ಳಿ, ಸೋಗಹಳ್ಳಿ, ಹೊಸಮಾಳ, ಕಳಸೂರು, ಹೊಳೆಹುಂಡಿ, ಎನ್ ಬೆಳತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಆಚರಣೆ ನಡೆದುಕೊಂಡು ಬಂದಿದೆ. ಈ ಭಾಗದಲ್ಲಿ ಆಚರಿಸುವ ದೀಪಾವಳಿ ಹಬ್ಬ ಅತ್ಯಂತ ಸೋಜಿಗ. ಪ್ರತಿ ವರ್ಷ ಬಲಿಪಾಡ್ಯಮಿ ದಿನ ‘ಬಲಿ ಚಕ್ರವರ್ತಿ ಚಟ್ಟ’ ಕಟ್ಟಿ, ಅದನ್ನು ಊರ ಹೆಬ್ಬಾಗಿಲಿನ ಮುಂದೆ ತೋರಣದಂತೆ ಕಟ್ಟುವುದು ಇಂದಿಗೂ ನಿಗೂಢ ಸಂಸ್ಕೃತಿಯಾಗಿದೆ.

ಬಲಿ ಚಕ್ರವರ್ತಿಯ ತೋರಣವನ್ನು ತಾಲೂಕಿನ ಅನೇಕ ಹಳ್ಳಿಗಳಲ್ಲಿ, ಮುಖ್ಯವಾಗಿ ಹೂಲೆಯ ಸಮುದಾಯ ವಾಸಿಸುವ ಕೇರಿಗಳಲ್ಲಿ ಕಟ್ಟುತ್ತಾರೆ. ಒಕ್ಕಲಿಗರು, ಉಪ್ಪಾರರು, ವಾಲ್ಮೀಕಿಗಳು, ಮಡಿವಾಳರು ಹೀಗೆ ಶ್ರಮಿಕ ಸಮುದಾಯಗಳ ಜನ ತಮ್ಮ ತಮ್ಮ ಕೇರಿಗಳಲ್ಲಿ ಬಲಿಪಾಡ್ಯಮಿ ದಿನ ಕೊಂಡ(ಬೆಂಕಿ, ಕಿಚ್ಚು) ಹಾಯುತ್ತಾರೆ. ಆದರೆ, ತೋರಣ ಕಟ್ಟುವುದಿಲ್ಲ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ ಡಾ. ಟಿ ಮಂಜು ಸತ್ತಿಗೆಹುಂಡಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಹೆಗ್ಗಡದೇವನ ಕೋಟೆಯು ಮೂಲತಃ ಜೈನ ರಾಜರು ಆಳಿದ ನೆಲೆ. ಪ್ರಾಚೀನ ಕಾಲದಲ್ಲಿ ಪುನ್ನಾಟರು, ಮಧ್ಯಕಾಲೀನದಲ್ಲಿ ಬಯಲು ನಾಡಿನ ಕದಂಬರು ಹೀಗೆ ಜೈನ ಮನೆತನಗಳು ಪ್ರಾಂತ್ಯವನ್ನು ಆಳ್ವಿಕೆ ಮಾಡಿವೆ. ತುಳುನಾಡಿನ ಜೈನ ಅರಸ ಹೆಗ್ಗಡದೇವ, ‘ಹೆಗ್ಗಡೆಪುರ’ ಎನ್ನುವ ಸ್ಥಳದಲ್ಲಿ ಆಳ್ವಿಕೆ ಮಾಡಿದ್ದನೆಂಬುದನ್ನು ಬ್ರಿಟಿಷ್ ಬರಹಗಾರ ಬುಕಾನನ್ ತನ್ನ ‘ಮದ್ರಾಸ್ ಟು ಮಲಬಾರ್’ ಕೃತಿಯಲ್ಲಿ ದಾಖಲಿಸಿದ್ದಾರೆ” ಎಂದು ಹೇಳಿದರು.
“ಪುನ್ನಾಟ ಸಾಮ್ರಾಜ್ಯದ ಬಗ್ಗೆ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿಯ ತಾಮ್ರಶಾಸನ ಕ್ರಿ.ಶ.550ರಲ್ಲಿ ಉಲ್ಲೇಖಿಸಲಾಗಿದೆ. ಪುನ್ನಾಟ 600 ಪ್ರಾಂತ್ಯವೆಂದು ಗಂಗಾ ಸಾಮ್ರಾಜ್ಯದ ಅವಿನೀತನ ಒಂದು ಶಾಸನ ಹೇಳುತ್ತದೆ. ಪುನ್ನಾಟದ ದೊರೆ ಸ್ಕಂದವರ್ಮನ ಮಗಳನ್ನು ಅವಿನೀತನು ಮದುವೆಯಾದನು. ಇವರ ಮಗನೇ ಗಂಗಾ ಸಾಮ್ರಾಜ್ಯದ ಶ್ರೇಷ್ಠ ದೊರೆ ದುರ್ವಿನೀತ ಎಂದು ಅನೇಕ ಇತಿಹಾಸಕಾರರು ಹೇಳುತ್ತಾರೆ. ಆದರೆ, ಚರಿತ್ರೆಯ ಜಾಡು ಹಿಡಿದು ಸಾಗಿದರೆ ಪುನ್ನಾಟ ಸಾಮ್ರಾಜ್ಯವು ದಕ್ಷಿಣ ಭಾರತದ ಮಹಿಷ ಮಂಡಲ, ಮುಷಿಕ ಮಂಡಲ, ಉದಕ ಮಂಡಲ, ತೊಂಡೈ ಮಂಡಲ, ಸಾಮ್ರಾಜ್ಯಗಳ ಸಮಕಾಲೀನ ಸಾಮ್ರಾಜ್ಯವೆಂದು ತಿಳಿದುಬರುತ್ತದೆ” ಎಂದರು.

“ಪುನ್ನಾಟ ಸಾಮ್ರಾಜ್ಯದಲ್ಲಿ ಪಚ್ಚೆ ಕಲ್ಲುಗಳು ಹೇರಳವಾಗಿ ದೊರೆಯುತ್ತಿದ್ದವು. ಇತಿಹಾಸಕಾರ ಪ್ಲೀನಿ ಮತ್ತು ಭೂಗೋಳ ಶಾಸ್ತ್ರಜ್ಞ ಟಾಲಮಿ ಈ ಕುರಿತು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ಇಲ್ಲಿನ ಪಚ್ಚೆ ಕಲ್ಲುಗಳ ವ್ಯಾಪಾರ ರೋಮ್ ಸಾಮ್ರಾಜ್ಯದವರೆಗೂ ವ್ಯಾಪಿಸಿತ್ತು. ಈಗಲೂ ಇಲ್ಲಿನ ಹೊಲಗಳಲ್ಲಿ ಕೆಂಪು ಬಣ್ಣದ ಪಚ್ಚೆ ಕಲ್ಲುಗಳು ಅಲ್ಪ ಪ್ರಮಾಣದಲ್ಲಿ ದೊರೆಯುತ್ತಿವೆ. ಕಿತ್ತೂರು ಅಥವಾ ಕೀರ್ತಿಪುರ ಇವತ್ತಿನ ತೆರಣಿ ಮುಟ್ಟಿ ಗ್ರಾಮವೇ ಅಂದಿನ ಪುನ್ನಾಟರ ರಾಜಧಾನಿಯಾಗಿತ್ತು. ಪುನ್ನಾಟರ ಕೊನೆಯ ದೊರೆ ರವಿದತ್ತ ಅಥವಾ ರವಿಗ ಅರಸನ ಆಡಳಿತದಲ್ಲಿನ ರವಿ ರಾಮೇಶ್ವರ ದೇವಾಲಯ ಈಗಲೂ ಕಿತ್ತೂರಿನಲ್ಲಿದೆ” ಎಂಬುದನ್ನು ತಿಳಿಸಿದರು.

“ಕಪಿಲ ನದಿ ತೀರದಿಂದ ವೈನಾಡಿನವರೆಗೂ ಹಬ್ಬಿದ್ದ ಈ ಸಂಸ್ಥಾನವು ಕಾಲಕ್ರಮೇಣ ನಶಿಸಿತು. ಅಳಿದುಳಿದ ಈ ಸಂಸ್ಥಾನದಲ್ಲಿ ಜೈನ ಬ್ರಾಹ್ಮಣರು ಸ್ವಾತಂತ್ರ್ಯೋತ್ತರ ಕಾಲಘಟ್ಟದವರೆಗೂ ಅಧಿಪತ್ಯ ಸ್ಥಾಪಿಸಿದ್ದರು. ಕಬಿನಿ ನದಿಗೆ ಅಣೆಕಟ್ಟು ಕಟ್ಟಿದ ನಂತರ ಇಡೀ ಸಂಸ್ಥಾನದ ಹಳ್ಳಿಗಳು ನೀರಿನಲ್ಲಿ ಮುಳುಗಿದವು. ಇದರಿಂದ ಜನ ದಿಕ್ಕಾಪಾಲಾದರು. ತಮ್ಮ ಮೂಲ ನೆಲೆಯಲ್ಲಿ ತಮಗೆ ಲಭ್ಯವಾದ ದೇವರು-ದಿಂಡರು ಮತ್ತು ದನ-ಕರುಗಳನ್ನು ಸಾಗಿಸಿಕೊಂಡು ಹೊಸ ನೆಲೆಗಳತ್ತ ಹೊರಟರು. ಹೀಗೆ ಮುಳುಗಡೆಯಾದ ಜನರ ಒಂದು ಸಣ್ಣಗುಂಪು ನೆಲೆಯಾದ ಊರೇ ಸತ್ತಿಗೆಹುಂಡಿ” ಎಂದರು.
“1995ರಲ್ಲಿ ನಾಗರಹೊಳೆ ಅಭಯಾರಣ್ಯವನ್ನು ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ, ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಆಗ ಊರಿನ ಹಿರಿಯರು ಪ್ರತಿ ದೀಪಾವಳಿಗೂ ಅರಣ್ಯ ಪ್ರವೇಶಕ್ಕೆ ಅನುಮತಿ ಮಾಡಿಕೊಡಬೇಕು. ಬಿದಿರು ತೋರಣ ಕಟ್ಟುವುದು ನಮ್ಮ ಸಂಪ್ರದಾಯವೆಂದು ಅರಣ್ಯ ಹಕ್ಕು ಸಮಿತಿಯ ಬಳಿ ಭಿನ್ನವಿಸಿಕೊಂಡರು. ಅರಣ್ಯದಂಚಿನ ಗ್ರಾಮಗಳು ಹಾಗೂ ಇತರೆ ಗ್ರಾಮಗಳಲ್ಲೂ, ಮುಳುಗಡೆಯಾಗದ ಗ್ರಾಮಗಳಲ್ಲೂ ತೋರಣ ಕಟ್ಟುವ ಪದ್ಧತಿ ಆದಿಯಿಂದಲೂ ನಡೆದುಬಂದಿದೆ. ಈ ಜನಸಂಸ್ಕೃತಿ ಪರಂಪರೆಯ ಕೊಂಡಿ ಯಾವುದಿರಬಹುದು? ಎಂಬುದನ್ನು ಅರಿಯಬೇಕಿದೆ” ಎಂದು ಸಲಹೆ ನೀಡಿದರು.

“ಬಲಿ ಚಕ್ರವರ್ತಿಯು ಹಿರಣ್ಯಕಶ್ಯಪುವಿನ ಮೊಮ್ಮಗ ವಿರೋಚನನ ಮಗ. ಇವನ ಸಾವಿಗೂ, ಹೆಗ್ಗಡದೇವನಕೋಟೆ ತಾಲೂಕಿನ ಹೊಲಯ ಜನಾಂಗಕ್ಕೂ ಇರುವ ಈ ಕರುಳ ಸಂಬಂಧ ಯಾವುದು? ಎಂಬುದರ ಬಗ್ಗೆ ಅನ್ವೇಷಣೆ ನಡೆಸಬೇಕಿದೆ. ಮೈಸೂರಿನ ನಗರ ಬಸ್ ನಿಲ್ದಾಣದ ಮುಂದಿರುವ ಪ್ರತಿಮೆಯು ವೆಂಕಟ ಕೃಷ್ಣಯ್ಯ(ತಾತಯ್ಯ) ಅವರದು. ಇವರು ಇದೇ ಪುನ್ನಾಟ ಪ್ರಾಂತ್ಯದ ಮಗ್ಗೆ ಗ್ರಾಮದವರು. ಮೈಸೂರಿನಲ್ಲಿ ಅನಾಥಾಲಯ, ಶಾರದಾ ವಿಲಾಸ ವಿದ್ಯಾಸಂಸ್ಥೆ ಮುಂತಾದವುಗಳ ನಿರ್ಮಾತೃ. ಮೈಸೂರಿನ ಪತ್ರಿಕಾ ಪಿತಾಮಹ. ಮೈಸೂರು ಆಡಳಿತ ಮೈಸೂರಿನ ಬ್ರಾಹ್ಮಣರಿಗೆ ಮಾತ್ರ ಮೀಸಲು ಎಂದು ಮದ್ರಾಸ್ ಬ್ರಾಹ್ಮಣರ ವಿರುದ್ಧ ಹೋರಾಟ ನಡೆಸಿ, ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಗೆ ಅಡಿಪಾಯ ಹಾಕಿದವರು” ಎಂಬುದನ್ನು ತಿಳಿಸಿದರು.
“ಇಂತಹ ಜೈನ, ಬ್ರಾಹ್ಮಣರ ಆಧಿಪತ್ಯದಲ್ಲೂ ಹೊಲೆಯರು ತಮ್ಮ ಸಾಂಸ್ಕೃತಿಕ ಇತಿಹಾಸವನ್ನು ತಲೆಮಾರಿನಿಂದ ತಲೆಮಾರಿಗೆ ಜತನವಾಗಿ ತಲುಪಿಸಿದ್ದು ಮಹಾ ಸೋಜಿಗ. ಇವತ್ತಿಗೂ ಊರುಗಳಲ್ಲಿ ಕಾಡಿನಿಂದ ಬಿದಿರು ತಂದು ʼಬಲಿ ಚಕ್ರವರ್ತಿ ಚಟ್ಟʼ ಕಟ್ಟಿ ತೋರಣ ಕಟ್ಟುತ್ತಾರೆ” ಎಂದು ವಿವರಿಸಿದರು.

ಜೀವಿಕ ಬಸವರಾಜು ಈ ದಿನ.ಕಾಮ್ ಜತೆಗೆ ಮಾತನಾಡಿ, “ದಕ್ಷಿಣ ಭಾರತದ ನಮ್ಮ ಪೂರ್ವಿಕರಾದ ಬಲಿಚಕ್ರವರ್ತಿಯನ್ನು ಮೋಸದಿಂದ ಬಲಿ ಪಡೆದರು. ವೈಧಿಕರು, ಬ್ರಾಹ್ಮಣಶಾಹಿಗಳು ಬಲಿಚಕ್ರವರ್ತಿ ಸತ್ತ ದಿನವನ್ನು ಬಲಿಪಾಡ್ಯಮಿ ದೀಪಾವಳಿಯೆಂದು ಆಚರಣೆಗೆ ತಂದು ದೇಶಾದ್ಯಂತ ಹಬ್ಬದಂತೆ ಆಚರಣೆ ಮಾಡುತ್ತಾರೆ. ಆದರೆ, ನಮ್ಮ ಕೋಟೆ ಭಾಗದಲ್ಲಿ ಭಿನ್ನವಾಗಿ ಹೊಲೆಯ ಸಮುದಾಯದವರು ಆಚರಣೆ ಮಾಡುವುದು ರೂಢಿಯಲ್ಲಿದೆ. ಅದರಂತೆ, ಕಟ್ಟೆಮನುಗನಹಳ್ಳಿಯೂ ಸೇರಿದಂತೆ ಅಮಾವಸ್ಯೆ ದಿನದಂದು ಗ್ರಾಮದ ಮಧ್ಯ ಭಾಗ(‘ಹಂತ’ ಎಂತಲೂ ಕರೆಯುತ್ತಾರೆ)ದಲ್ಲಿ ಸಮುದಾಯದವರು ಸೇರಿ ಪೂಜೆ ಮಾಡಿ ಕಟ್ಟಿಗೆ ಒಟ್ಟುಗೂಡಿಸಿ ಕೊಂಡದ ಗುಳಿಗೆ ಬೆಂಕಿ ಹಚ್ಚುತ್ತಾರೆ” ಎಂದು ಹೇಳಿದರು.

“ಬಲಿಪಾಡ್ಯಮಿಯಿಂದ ದೀಪಾವಳಿ ಹಬ್ಬದ ತನಕ ಸತತ ಮೂರು ದಿನ ಕೊಂಡ ಹಚ್ಚುವುದು ಪದ್ಧತಿ. ಅದೇ ರೀತಿ ದೀಪಾವಳಿ ಹಬ್ಬದ ದಿನದ ಬೆಳಿಗ್ಗೆ ಊರಿನ ದೇವಸ್ಥಾನದ ಹತ್ತಿರ ಕಾಡಿನಿಂದ ತಂದ ಬಿದುರಿನ ಹಚ್ಚೆಗಳಿಂದ ಬಲಿ ಚಕ್ರವರ್ತಿ ಚಟ್ಟ ಕಟ್ಟಿ, ಅದಕ್ಕೆ ಪ್ರತಿ ಮನೆಗಳಿಂದ ತಂದ ಹೂವು, ಬಾಳೆ ದಿಂಡು, ಬಣ್ಣದ ಬಟ್ಟೆಗಳು, ಮನೆಯಲ್ಲಿ ಸಿದ್ದಪಡಿಸಿದ ದೋಸೆ, ವಡೆ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಇಡ್ಲಿ ಹೀಗೆ ಹಲವಾರು ತಿನಿಸುಗಳನ್ನು ನೇತುಹಾಕಿ ತೋರಣ ನಿಲ್ಲಿಸುತ್ತಾರೆ” ಎನ್ನುತ್ತಾರೆ.

“ಸಂಜೆ ಹೊತ್ತಿಗೆ ಮನೆಯಲ್ಲಿನ ದನ ಕರುಗಳ ಮೈ ತೊಳೆದು, ಸಿಂಗರಿಸಿ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವುದು, ಎತ್ತಿನ ಬಂಡಿ ಓಡಿಸುವುದು ಪ್ರತೀತಿ. ಇದರ ಜತೆಗೆ ಮನೆ, ದೇವಸ್ಥಾನದ ಮುಂಭಾಗ ಹುಲ್ಲು ಗುಡ್ಡೆಗೆ ಬೆಂಕಿ ಹಚ್ಚಿ ರೋಗ ರುಜಿನ ಬಾರದಂತೆ ಕಿಚ್ಚು ಹಾಯಿಸುತ್ತಾರೆ. ಕತ್ತಲಾಗುತ್ತಿದ್ದಂತೆ ತಿಪ್ಪೆ ಬಳಿ ತೆರಳಿ, ಕಟ್ಟಿಗೆ ತುಂಡಿಗೆ ಬಟ್ಟೆ ಸುತ್ತಿ ಪಂಜಿನ ರೀತಿ ಮಾಡಿ ಬೆಂಕಿ ಹಚ್ಚಿ ದೀಪದಂತೆ ಬೆಳಕು ಇಟ್ಟು, ಮನೆ ಮನೆ ಮುಂದೆ ದೀಪ ಹಚ್ಚುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹುಲಿ ದಾಳಿಗೆ ಮತ್ತೋರ್ವ ದನಗಾಹಿ ಬಲಿ

ಈ ಬಾರಿ ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ಆಚರಣೆಗೆ ತೊಡಕಾಗಿತ್ತು. ಕೊಂಡ ಮಾಡಲು ಸಾಧ್ಯವಾಗದೆ ಇದ್ದರೂ, ಬಲಿ ಚಕ್ರವರ್ತಿ ಚಟ್ಟ ತೋರಣ ಕಟ್ಟಿ ಸಮುದಾಯದವರು ಸಂಭ್ರಮಿಸಿದ್ದಾರೆ. ದೀಪಾವಳಿ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರುತಿದ್ದಾರೆ.
ಭಾರತದ ಮೂಲ ನಿವಾಸಿಗಳ ಹಬ್ಬಗಳನ್ನು-ಸಾಂಸ್ಕೃತಿಕ ಆಚರಣೆಗಳನ್ನು ಬೇರೆ ಬೇರೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಉದ್ದೇಶಗಳಿಗಾಗಿ ತಳಕು ಹಾಕಲಾಗಿದೆ. ಜನರ ಕೃಷಿ ಅಚರಣೆಗಳು ಅದಕ್ಕೆ ಸಂಬಂಧಪಟ್ಟ ಹಬ್ಬಗಳು ಹಾಗೂ ಜಾನಪದಗಳನ್ನು ಸಂಘಟಿತ ಧರ್ಮಗಳು ತಮ್ಮ ಧಾರ್ಮಿಕ ವ್ಯವಸ್ಥೆ ಮತ್ತು ಹಬ್ಬಗಳ ಭಾಗಗಳನ್ನಾಗಿ ಮಾಡಿ ಅದರ ಮೂಲಗಳನ್ನು ಗುರುತಿಸದಂತೆ ಮಾಡಲಾಗಿದೆ.
ಅಂತೆಯೇ ಮೂಲನಿವಾಸಿಗಳು, ಅವರ ರಾಜರುಗಳು, ಸಂತರು, ಕ್ರಾಂತಿಕಾರರು, ಕವಿಗಳು, ದಾರ್ಶನಿಕರು, ಧಾರ್ಮಿಕ ಗುರುಗಳು, ವಿದ್ವಾಂಸರ ಮೇಲೆ ನಡೆದ ಆಕ್ರಮಣಗಳು ಹಬ್ಬಗಳಾಗಿ ಪರಿವರ್ತನೆಯಾದರೆ, ಅದೇ ಪ್ರಕ್ರಿಯೆಗಳು ಮೂಲನಿವಾಸಿ ನಾಗಾ ದ್ರಾವಿಡ ಜನರಿಗೆ ತಮ್ಮ ತಮ್ಮ ರಾಜರನ್ನು ನೆನಪಿಸಿಕೊಳ್ಳುವ ಸ್ಮರಣಾ ದಿನಗಳಾಗುತ್ತವೆ. ಹಿರಿಯರುಗಳಿಗೆ ‘ಎಡೆ ಇಟ್ಟು’ ನೆನಪಿಸಿಕೊಳ್ಳುವುದು -ಆರಾಧಿಸುವುದು ದ್ರಾವಿಡ ಪರಂಪರೆಯಾಗಿದೆ. ಈ ಪರಂಪರೆಯೊಳಗೆ ಇರುವ ಆಕ್ರಮಣಗಳು, ಕೊಲೆ, ಹಿಂಸೆಗಳು, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪಲ್ಲಟಗಳು-ಅವನತಿಗಳ ಒಳಪದರಗಳ ಅರಿವು ಮೂಲನಿವಾಸಿ ಬಹುಜನರಿಗೆ ಸ್ಪಷ್ಟವಾಗಿದೆ. ಇದನ್ನು ಮರೆಮಾಚಲು ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಹಿತ್ಯಿಕ ವಿಸ್ಮೃತಿಯನ್ನು ಮೂಲನಿವಾಸಿಗಳ ಮೇಲೆ ಹೇರಲಾಗಿದೆ.
ಒಟ್ಟಾರೆಯಾಗಿ ದುಃಖದ ದಿನಗಳು- ಸ್ಮರಣಾ ದಿನಗಳು ಹಬ್ಬಗಳಾಗುವಂತಹ; ಮೂಲನಿವಾಸಿಗಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಚರಣೆಗಳು-ಹಬ್ಬಗಳು ಮತ್ತು ಅವರಿಗೆ ಸೇರಿದ ಮಹಾನ್ ವ್ಯಕ್ತಿಗಳು ದುಷ್ಟತೆಯ ಪ್ರತೀಕವಾಗುವ ಮೂಲಕ ಆ ವ್ಯಕ್ತಿಗಳನ್ನೆಲ್ಲ ಕೊಲ್ಲಲು ಸಮರ್ಥನೆ ಮತ್ತು ಅನುಮತಿಯನ್ನು ದಯಪಾಲಿಸುವ ಸಮಾಜೋ -ಸಾಂಸ್ಕೃತಿಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.
ಜ್ಯೋತಿಬಾ ಫುಲೆ ಈ ದೇಶವನ್ನು ‘ಬಲಿಸ್ತಾನ್’ ಎಂಬುದಾಗಿಯೇ ಕರೆಯಲು ಇಚ್ಛಿಸುತ್ತಿದ್ದರು. ಹಾಗೆಯೇ ಈಗಿನ ಪಾಕಿಸ್ತಾನದಲ್ಲಿನ ಬಲೂಚಿಸ್ತಾನ್ ಪ್ರಾಂತದ ಹೆಸರನ್ನೂ ಕೂಡ ಬಲಿಯ ನೆನಪಿಗೆ ಇಡಲಾಗಿದೆಯೆಂದು ಹೇಳಲಾಗಿದೆ. ಇಟಲಿಯ ಸಂಶೋಧಕ ಜಿ. ವೆರಾರ್ಡಿ ಬಾದಾಮಿಯ ಬೌದ್ಧ ಗುಹೆಗಳಲ್ಲಿ ಬಲಿ ಚಕ್ರವರ್ತಿಯ ಕೆತ್ತನೆಗಳನ್ನು ಗುರುತಿಸುವ ಮೂಲಕ, ʼಬಲಿ ಪುರಾಣದ ವ್ಯಕ್ತಿಯಲ್ಲ; ಬದಲಾಗಿ ಐತಿಹಾಸಿಕ ವ್ಯಕ್ತಿʼ ಎಂಬುದಕ್ಕೆ ಸಾಕ್ಷಿ ನುಡಿಯುತ್ತಾನೆ. ಆದರೆ ಭಾರತದ ಸಾಂಸ್ಕೃತಿಕ ಸಂಕಥನಗಳು ಮತ್ತು ಸಾಂಸ್ಕೃತಿಕ ರಾಜಕಾರಣ ಬಲಿ ಚಕ್ರವರ್ತಿಯನ್ನು ಪುರಾಣ ಹಾಗೂ ಕೆಟ್ಟವ್ಯಕ್ತಿ ಎಂಬುದಾಗಿ ಬಿಂಬಿಸಲು ಸಾಕಷ್ಟು ಶ್ರಮಿಸಿವೆ. ಆದರೆ ದಕ್ಷಿಣ ಏಷ್ಯಾದ ಮೂಲ ನಿವಾಸಿಗಳಿಗೆ ಅವರ ಸಾಂಸ್ಕೃತಿಕ ಅಸ್ಮಿತೆ ಮತ್ತು ಜನಾಂಗದ ಭಾಗವಾಗಿಯೇ ಬಲಿ ಚಕ್ರವರ್ತಿ ಉಳಿದುಕೊಂಡಿರುವುದನ್ನು ನಾವು ಕಂಡುಕೊಳ್ಳಬಹುದು. ಹಾಗಾಗಿ ಬಲಿ ಚಕ್ರವರ್ತಿ ಬಗ್ಗೆ ಇನ್ನೂ ಅಧಿಕವಾದ ಗಂಭೀರ ಅಧ್ಯಯನಗಳು ನಡೆಯಬೇಕಾಗಿದೆ. ಬಲಿ ಎಂಬ ಇತಿಹಾಸಕಾರನ್ನು ಪ್ರಸ್ತುತ ಪೀಳಿಗೆಗೆ ಪರಿಚಯಿಸಬೇಕಾಗಿದೆ.





