ಬೀದರ್ ಜಿಲ್ಲೆಯ ಹುಲಸೂರ ಗ್ರಾಮ ಪಂಚಾಯತಿ 34 ಸದಸ್ಯ ಬಲ ಹೊಂದಿದೆ. ಸಾಮಾಜಿಕ, ಆರ್ಥಿಕ ಹಾಗೂ ಜನಸಂಖ್ಯೆಯಲ್ಲಿ ಬೆಳೆಯುತ್ತಿರುವ ತಾಲೂಕು ಕೇಂದ್ರವಾಗಿದೆ. ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಅರ್ಹತೆ ಇದ್ದರೂ ಜಿಲ್ಲೆಯವರೇ ಆದ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಹುಲಸೂರ ತಾಲೂಕು ವ್ಯಾಪ್ತಿಯ ಸುತ್ತಲಿನ ಗ್ರಾಮಸ್ಥರು, ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಹುಲಸೂರ ತಹಸೀಲ್ದಾರ ಕಚೇರಿಯಲ್ಲಿ ಶನಿವಾರ ವಿವಿಧ ಗ್ರಾಮಗಳ ಪ್ರಮುಖರು ಬೊಬ್ಬೆ ಹಾಕುವ ಮೂಲಕ ತಹಶೀಲ್ದಾರ್ ಶಿವಾನಂದ ಮೆತ್ರೆ ಅವರ ಮೂಲಕ ಪೌರಾಡಳಿತ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ʼಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಎಚ್ತೆತ್ತು ಹುಲಸೂರ ಪಟ್ಟಣ ಪಂಚಾಯತಿಯಾಗಿ ಘೋಷಣೆಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹುಲಸೂರ ಗ್ರಾಮಸ್ಥರ ಜೊತೆಯಲ್ಲಿ ರಸ್ತೆಗಿಳಿದು ಉಗ್ರವಾಗಿ ಹೋರಾಟ ಮಾಡಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಧೀರ ಕಾಡಾದಿ ಮಾತನಾಡಿ, ʼಜಿಲ್ಲೆಯಲ್ಲಿಯೆ ದೊಡ್ಡ ಗ್ರಾಮ ಪಂಚಾಯತಿ ಆಗಿರುವ ಹುಲಸೂರ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿ ಆಗಿ ಮಾಡಬೇಕು ಎನ್ನುವ ಹಲವು ವರ್ಷಗಳ ಬೇಡಿಕೆಯಿದ್ದರೂ ಸ್ಪಂದಿಸದೆ ರಾಜಕೀಯ ಷಡ್ಯಂತ್ರ ನಡೆಸಿ ಹುಲಸೂರ ತಾಲೂಕಿಗೆ ಅನ್ಯಾಯ ಎಸಗಲಾಗುತ್ತಿದೆʼ ಎಂದರು.
ಬರುವ ಚಳಿಗಾಲದ ಅಧಿವೇಶನಕ್ಕಿಂತ ಮುಂಚೆ ಹುಲಸೂರ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿಯನ್ನಾಗಿ ಘೋಷಣೆ ಆಗಬೇಕು. ಸಾಯಗಾಂವ ಹೋಬಳಿಯ 16 ಗ್ರಾಮಗಳು ಹುಲಸೂರ ತಾಲೂಕಿಗೆ ಸೇರ್ಪಡೆ ಮಾಡಬೇಕುʼ ಎಂದು ಆಗ್ರಹಿಸಿದರು.
ʼಹುಲಸೂರ ತಾಲೂಕು ಘೋಷಣೆಯಾಗಿ 8 ವರ್ಷ ಕಳೆದಿವೆ. ಹುಲಸೂರ ಪಟ್ಟಣ ಪಂಚಾಯಿತಿ ಘೋಷಣೆಗೆ ಮನವಿ ಪತ್ರ ಸಲ್ಲಿಸಿದರೂ ಇಲ್ಲಿಯವರೆರೂ ಘೋಷಣೆ ಮಾಡದಿರುವುದಕ್ಕೆ ಯಾರು ಕಾರಣ. ಪದೆ ಪದೇ ಹುಲಸೂರು ತಾಲೂಕಿಗೆ ಅನ್ಯಾಯವಾಗುತ್ತಿದೆ, ಇದನ್ನು ಸಹಿಸಲು ಸಾಧ್ಯವಿಲ್ಲʼ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರ್ಯಕಾಂತ ಚೆಲ್ಲಾಬಟ್ಟೆ ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯ ನಾಗೇಶ ಮೇತ್ರೆ ಮಾತನಾಡಿ, ʼಹುಲಸೂರ ಪಟ್ಟಣ ಪಂಚಾಯತಿ ಮಾಡಬೇಕೆಂದು ಸರ್ಕಾರ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರೂ ಕಡೆಗಣೆಸುತ್ತಿದ್ದಾರೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. 22 ನವೆಂಬರ್‌ವರೆಗೆ ಪಟ್ಟಣ ಪಂಚಾಯತಿ ಆಗಿ ಘೋಷಣೆ ಮಾಡದಿದ್ದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಮನೆಯವರೆಗೆ ಪಾದಯಾತ್ರೆ ನಡೆಸಿ ಘೇರಾವ್ ಹಾಕುತ್ತೇವೆʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
ಪ್ರಮುಖರಾದ ಓಂಕಾರ ಪಟ್ನೆ, ಸೋಮನಾಥ ನಂದಗೆ, ರಮೇಶ ಧಬಾಲೆ, ರಾಮಲಿಂಗ ಸಾಗಾಂವೆ, ಅರವಿಂದ ಹರಪಲ್ಲೆ, ಜಗದೀಶ್ ದೇಟ್ನೆ, ಮಾಹದೇವ ಕವಟೆ, ಸಿದ್ರಾಮ ಪಾರಶೆಟ್ಟೆ, ಲವೀತ ಧರಮಾಣೆ, ರಾಜಕುಮಾರ ತೋಂಡಾರೆ, ಕಾಶಿನಾಥ ಕಲಾಲ, ಕೇದರ ಭೋಪಳೆ, ರಾಜಶೇಖರ ಬಿರಾದಾರ, ಕಲ್ಯಾಣಿ ದಾನಾ, ಗುಂಡಪ್ಪಾ ಕುಡಂಬಲೆ, ಅಂಬದಾಸ ಮೇತ್ರೆ ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಸಾರ್ವಜನಿಕರು ಉಪಸ್ಥಿತರಿದ್ದರು.





