ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು, ಹಳಕೆರೆ ಹಾಡಿಯಲ್ಲಿ ಕದ್ದ ಕೋಳಿ ತಿನ್ನುವ ವಿಚಾರಕ್ಕೆ ಅಪ್ರಾಪ್ತ ಯುವಕರಿಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ದುರ್ಘಟನೆ ವರದಿಯಾಗಿದೆ.
ಹಳಕೆರೆ ಹಾಡಿಯ ಸುರೇಶ್ ಎಂಬುವರ ಪುತ್ರ ದಿಲೀಪ್ (14) ಮೃತಪಟ್ಟ ಬಾಲಕ. ಹಲ್ಲೆ ಮಾಡಿದ ಯುವಕ 14 ವರ್ಷದ ಅಪ್ರಪ್ತಾನೆಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಇವರಿಬ್ಬರು ಕದ್ದ ಕೋಳಿಯನ್ನು ಕಾಡಿಗೆ ತೆಗೆದುಕೊಂಡು ಹೋಗಿ, ಬೇಯಿಸಿ ತಿಂದಿದ್ದಾರೆ. ಅದೇ ವೇಳೆ ಹೆಚ್ಚು ಮಾಂಸ ತಿಂದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಶಿವಣ್ಣ ಎಂಬುವರ ಮನೆಯ ಹತ್ತಿರವಿದ್ದ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ದಿಲೀಪನನ್ನು ಕೃತ್ಯವೆಸಗಿದ ಯುವಕನ ತಂದೆ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ‘ಬಾರುಕೋಲು’ ರಾಸುಗಳಿಗಷ್ಟೇ ಅಲ್ಲಾ, ಸರ್ಕಾರ ದಾರಿ ತಪ್ಪಿದಾಗಲು ದಂಡನಾಸ್ತ್ರವೇ: ರಾಕೇಶ್ ಟಿಕಾಯತ್
ಮೃತ ಬಾಲಕನ ದೊಡ್ಡಪ್ಪ ಅಣ್ಣಯ್ಯ ಈ ಕುರಿತಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿರುವ ಬಾಲಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





