ಉತ್ತರ ಕನ್ನಡ: 2025–26ನೇ ಸಾಲಿನ ಮುಂಗಾರು ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ ರೈತರಿಗೆ ಸರ್ಕಾರದ ಪರಿಹಾರ ಹಣ ಬಿಡುಗಡೆ ಆಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕಾರವಾರ) ಸೂಚನೆಯಂತೆ, ಬೆಳೆ ಹಾನಿಯಾದ 638 ರೈತರ ಬ್ಯಾಂಕ್ ಖಾತೆಗೆ, ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಯಮಗಳ (NDRF/SDRF) ಪ್ರಕಾರ ರೂ. 27,66,818/- ಹಣವನ್ನು AEPS (ಆಧಾರ್ ಸಂಪರ್ಕಿತ ನೇರ ಹಣ ಪಾವತಿ ವ್ಯವಸ್ಥೆ) ಮೂಲಕ ನೇರವಾಗಿ ಜಮೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಮಳೆಯಿಂದ ಬೆಳೆ ನಷ್ಟವಾದ ರೈತರಿಗೆ ಹೆಚ್ಚುವರಿ ನೆರವು ನೀಡಲು ಇನ್ಪುಟ್ ಸಬ್ಸಿಡಿ (ಕೃಷಿ ಮರು ಆರಂಭಕ್ಕೆ ನೀಡುವ ಸಹಾಯ ಧನ) ಹಣವನ್ನು ಹೆಚ್ಚಿಸಿದೆ. ಈ ಯೋಜನೆಗೆ ನವೆಂಬರ್ 27, 2025ರಂದು, ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಸಂವಾದದ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ಪರಿಷ್ಕೃತ (ಹೆಚ್ಚಿಸಿದ) ಸಬ್ಸಿಡಿ ದರಗಳು ಗರಿಷ್ಠ 2 ಹೆಕ್ಟೇರ್ ಜಮೀನಿಗೆ ಹೀಗಿವೆ: ಮಳೆಯನ್ನೇ ನಂಬಿ ಬೆಳೆಯುವ ಬೆಳೆಗಳಿಗೆ: ಹೆಕ್ಟೇರ್ಗೆ ರೂ. 8,500 – ರೂ. 17,000, ಬಾವಿ/ನದಿ/ಕಾಲುವೆ ನೀರಿನ ಮೂಲಕ ಬೆಳೆಯುವ ಬೆಳೆಗಳಿಗೆ: ರೂ. 17,000 – ರೂ. 25,500, ಹಲವು ವರ್ಷ ಬೆಳೆ ಕೊಡುವ ತೋಟದ ಬೆಳೆಗಳಿಗೆ (ಉದಾ: ಅಡಿಕೆ, ತೆಂಗು, ಮಾವು): ರೂ. 22,500 – ರೂ. 31,000ಈ ಹೆಚ್ಚುವರಿ ಪರಿಹಾರ ಹಣವಾಗಿ, ಜಿಲ್ಲೆಯ 638 ರೈತರ ಬ್ಯಾಂಕ್ ಖಾತೆಗೆ, ರೂ. 19,92,199/- ಅನ್ನು ಕೂಡ AEPS ಮೂಲಕ ನೇರವಾಗಿ ಪಾವತಿ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಪಶ್ಚಿಮ ಪದವೀಧರರ ಮತಕ್ಷೇತ್ರ ಚುನಾವಣೆ–2026: 14,231 ಕರಡು ಮತದಾರರ ಪಟ್ಟಿ ಪ್ರಕಟ
ನೇರ ಹಣ ಪಾವತಿ ವ್ಯವಸ್ಥೆ ಬಳಸಿರುವುದರಿಂದ ಯಾವುದೇ ಮಧ್ಯವರ್ತಿಗಳಿಲ್ಲದೇ, ಹಣ ನೇರವಾಗಿ ರೈತರ ಖಾತೆಗಳಿಗೆ ತಲುಪಿದೆ. ಇದರಿಂದ ಪರಿಹಾರ ವಿತರಣೆಯಲ್ಲಿ ಗೊಂದಲ ಹಾಗೂ ವಿಳಂಬ ತಪ್ಪಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ಹೇಳಿವೆ. ಈ ಪರಿಹಾರದಿಂದ ಮಳೆ ಹಾನಿಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮರು ಆರಂಭಿಸಲು, ಬಿತ್ತನೆ ಬೀಜ, ಗೊಬ್ಬರ, ಔಷಧ ಖರೀದಿಗೆ ನೆರವಾಗಲಿದೆ. ಮುಂದಿನ ಬೆಳೆ ಹಂಗಾಮಿಗೆ ಸಿದ್ಧತೆ ಮಾಡಿಕೊಂಡು, ಜೀವನ ಸಾಗಿಸಲು ಸರ್ಕಾರದ ಈ ಕ್ರಮ ಸಹಕಾರಿಯಾಗಲಿದೆ.





