ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗಾಗಿ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದ್ದ ಕರಡು ಜಾತಿವಾರು ಮೀಸಲಾತಿ ಪಟ್ಟಿ ಜಿಲ್ಲೆಯಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಕಟಣೆ ಹೊರಬಂದ ಒಂದೇ ವಾರದಲ್ಲಿ ಒಟ್ಟು 116 ಆಕ್ಷೇಪಣೆ ಅರ್ಜಿಗಳು ದಾಖಲಾಗಿದ್ದಾವೆ ಎಂದು ತಿಳಿದುಬಂದಿದೆ.
ಇದರಿಂದ ಕರಡು ಮೀಸಲಾತಿ ಹಂಚಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾದಂತಿದೆ. ನಗರಾಭಿವೃದ್ಧಿ ಇಲಾಖೆ ನವೆಂಬರ್ 10ರಂದು ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್ ವಾರು ಮೀಸಲಾತಿ ಕರಡು ಪ್ರಕಟಿಸಿತ್ತು. ಕಾರವಾರ–ಶಿರಸಿ ನಗರಸಭೆಗಳ 62 ವಾರ್ಡ್‌ಗಳು, ಹಳಿಯಾಳ–ಕುಮಟಾ–ಅಂಕೋಲಾ ಪುರಸಭೆಗಳ 66 ವಾರ್ಡ್‌ಗಳು, ಮತ್ತು ಸಿದ್ದಾಪುರ–ಮುಂಡಗೋಡ–ಹೊನ್ನಾವರ ಪಟ್ಟಣ ಪಂಚಾಯಿತಿಗಳ 54 ವಾರ್ಡ್‌ಗಳಿಗೆ ಜಾತಿವಾರು ಮೀಸಲಾತಿ ಜಾರಿಗೊಳಿಸಿತ್ತು.
ಒಟ್ಟು 182 ವಾರ್ಡ್‌ಗಳಿಗೆ ಜಾತಿವಾರು ಮೀಸಲಾತಿ ಪ್ರಕಟಿಸಲಾಗಿತ್ತು. ಮೀಸಲಾತಿ ಹಂಚಿಕೆ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದರೆ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಅದರಂತೆ 8 ತಾಲ್ಲೂಕುಗಳಿಂದ 116 ಆಕ್ಷೇಪಣೆ ಅರ್ಜಿಗಳು ಸಲ್ಲಿಕೆಯಾಗಿವೆ. ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 40 ಅರ್ಜಿಗಳು ಸಲ್ಲಿಕೆಯಾಗಿವೆ. ಕಾರವಾರದಿಂದ 18, ಶಿರಸಿಯಿಂದ 19, ಹಳಿಯಾಳದಿಂದ 12, ಮುಂಡಗೋಡದಿಂದ 11, ಸಿದ್ದಾಪುರದಿಂದ 10, ಹೊನ್ನಾವರದಿಂದ 4, ಕುಮಟಾಯಿಂದ 2 ಆಕ್ಷೇಪಣೆಗಳು ದಾಖಲಾಗಿವೆ.
ಈ ಸುದ್ದಿ ಓದಿದ್ದೀರಾ? ಗೋಕರ್ಣ | ಕುಡ್ಲೆ ಬೀಚ್‌ನಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿದ ಕಜಕಿಸ್ತಾನ ಮೂಲದ ಮಹಿಳೆ ರಕ್ಷಣೆ
ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 17ರ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿತ್ತು, ಬಹುತೇಕ ಅರ್ಜಿಗಳು ಪ್ರಕಟಿಸಿದ ಮೀಸಲಾತಿಯನ್ನು ಬದಲಿಸಲು ಸಲ್ಲಿಸಿದ ಅರ್ಜಿಗಳಾದರೆ. ಇನ್ನೂ ಕೆಲವು ಅರ್ಜಿಗಳು ಪ್ರಸ್ತುತವಾಗಿ ಪ್ರಕಟಿಸಿರುವ ವಾರ್ಡ್ ವಾರು ಮೀಸಲಾತಿಯನ್ನು ಯಥಾ ಪ್ರಕಾರ ಉಳಿಸುವಂತೆ ಸಲ್ಲಿಸಿದ ಮನವಿ ಅರ್ಜಿಗಳಾಗಿವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಿದ್ದಾರೆ. ಸಲ್ಲಿಸಿದ ಆಕ್ಷೇಪಣೆ ಅರ್ಜಿಗಳು ಸರಿಯಾದ ಕಾರಣ ಹಾಗೂ ದಾಖಲೆಗಳಗಳನ್ನು ಒಳಗೊಂಡಿದರೆ ಮಾತ್ರ ಮೀಸಲಾತಿ ಬದಲಾವಣೆಯ ವಿಚಾರದಲ್ಲಿ ಪರಿಶೀಲನೆ ನಡೆಸಿ, ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸುವುದಾಗಿ ಇಲಾಖೆ ಮೂಲಗಳು ತಿಳಿಸಿವೆ.





