ಉತ್ತರ ಕನ್ನಡ: ಕಾರವಾರದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ವ್ಯಕ್ತಿಯೊಬ್ಬ ಪಕ್ಕದಲ್ಲಿ ಕುಳಿತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿ ನಿದ್ದೆ ಮಾಡುತ್ತಿದ್ದಾಗ, ಪಕ್ಕದ ಆಸನದಲ್ಲಿ ಕುಳಿತಿದ್ದ ಯುವಕ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿದ್ದೆಯಿಂದ ಏಕಾಏಕಿ ಎಚ್ಚರಗೊಂಡ ಯುವತಿ, ಆರೋಪಿಯ ಕೈ ತನ್ನ ಎದೆ ಮೇಲಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ.
ಆದರೆ ಗಾಬರಿಗೊಳ್ಳದೆ ಧೈರ್ಯ ತೋರಿದ ಯುವತಿ, ತಕ್ಷಣವೇ ತನ್ನ ಮೊಬೈಲ್ ಫೋನ್‌ನಲ್ಲಿ ಆರೋಪಿಯ ವಿಡಿಯೋವನ್ನು ಚಿತ್ರೀಕರಿಸಿದ್ದಾಳೆ. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಯುವಕನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ವಿಡಿಯೋದಲ್ಲಿ ಯುವತಿ ಆರೋಪಿಯ ವರ್ತನೆಯನ್ನು ಖಂಡಿಸಿದ್ದು ಇಂತಹ ಕೃತ್ಯ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾಳೆ. ಜೊತೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಟ್ಯಾಗ್ ಮಾಡಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಮಹಿಳೆಯರು ತಮ್ಮ ರಕ್ಷಣೆಗೆ ತಾವೇ ಧೈರ್ಯದಿಂದ ಮುಂದೆ ಬರಬೇಕು ಎಂಬ ಸಂದೇಶವನ್ನೂ ಯುವತಿ ನೀಡಿದ್ದಾಳೆ.
ಘಟನೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ವರದಿಯಾದರೂ ಅಲುಗಾಡದ ಆಡಳಿತ: ಅಧಿಕಾರಿಗಳ ‘ಮೌನ’ಕ್ಕೆ ಕಾರಣವೇನು?
ಧೈರ್ಯ ತೋರಿದ ಈ ಯುವತಿಯ ನಡೆಗೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸಭ್ಯವಾಗಿ ವರ್ತಿಸುವವರಿಗೆ ಇಂತಹ ಪಾಠ ಕಲಿಸುವುದು ಅನಿವಾರ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.





