ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ವೈದ್ಯ ಡಾ. ರಾಜು ಪಿಕಳೆ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರವಾರ ತಾಲೂಕಿನ ವೈಲವಾಡ ಗ್ರಾಮದ ನಿವಾಸಿಗಳಾದ ಸುಭಾಷ್, ಹರಿಶ್ಚಂದ್ರ ಹಾಗೂ ಅನಿಲ್ ಬಂಧಿತ ಆರೋಪಿಗಳಾಗಿದ್ದಾರೆ. ಅಂಕೋಲಾ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ: ಸುಮಾರು ಹದಿನೈದು ದಿನಗಳ ಹಿಂದೆ ಡಾ. ರಾಜು ಪಿಕಳೆ ಅವರ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಅವಧಿ ಮೀರಿದ (Expiry date ಮುಗಿದ) ಮಾತ್ರೆ ನೀಡಲಾಗಿತ್ತು ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಕಿರಿಕ್ ನಡೆದಿತ್ತು.
ಈ ವೇಳೆ ಅಲ್ಲಿಗೆ ಬಂದಿದ್ದ ಕೆಲವರು ವೈದ್ಯರನ್ನು ಪ್ರಶ್ನಿಸಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಡಾ. ಪಿಕಳೆ ಅವರು, “ಇದು ಕಣ್ತಪ್ಪಿನಿಂದ ಸಂಭವಿಸಿದ ಪ್ರಮಾದ” ಎಂದು ಹೇಳಿ ಸಾರ್ವಜನಿಕವಾಗಿ ಕ್ಷಮೆಯನ್ನೂ ಕೇಳಿದ್ದರು.
ಈ ಸುದ್ದಿ ಓದಿದ್ದೀರಾ? ಜೋಯಿಡಾ | ಜಗಲಬೇಟ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಕಾಡುಕೋಣ ಬಲಿ; ಗ್ರಾಮಸ್ಥರಲ್ಲಿ ಮನೆಮಾಡಿದ ಭೀತಿ
ಆದರೆ, ಈ ವಿಡಿಯೋ ಸತತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದರಿಂದ ತೀವ್ರ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದ ವೈದ್ಯರು, ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.





