ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ವಾಯುಭಾರ ಕುಸಿತವಾಗಿದ್ದು, ಅದು ನಿಧಾನವಾಗಿ ಈಶಾನ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಅಕ್ಟೋಬರ್ 23ರಿಂದ ಅಕ್ಟೋಬರ್ 25ರ ಬೆಳಿಗ್ಗೆ 8.30 ಗಂಟೆಯವರೆಗೆ ಉತ್ತರ ಕನ್ನಡ ಜಿಲ್ಲೆಗೆ “ಆರೆಂಜ್ ಅಲರ್ಟ್” ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯ ಪ್ರಕಾರ, 45 ರಿಂದ 55 ಕಿ.ಮೀ ವೇಗದಲ್ಲಿ ಸಮುದ್ರ ತೀರ ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಮಳೆಯ ಜೊತೆಗೆ ಗಾಳಿಯ ತೀವ್ರತೆ ಹೆಚ್ಚಾಗುವ ಹಿನ್ನೆಲೆ, ಅಪಾಯಕಾರಿ ಮರಗಳ ಸುತ್ತಮುತ್ತ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಹಾಗೂ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಎಂದು ಸೂಚಿಸಲಾಗಿದೆ. ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ವಾಸಿಸುವವರೂ ಕೂಡ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ಸಣ್ಣ ಹಾಗೂ ಮಧ್ಯಮ ದೋಣಿಗಳು ಮೀನುಗಾರಿಕೆಗೆ ಇಳಿಯಬಾರದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ. ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡುವಂತೆ ಹಾಗೂ ಪ್ರಕಟಣೆ ಜಾರಿಗೆ ತರಬೇಕೆಂದು ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಭವನ ನಿರ್ಮಿಸಲು ತಕರಾರು; ಗ್ರಾಪಂ ಅಧ್ಯಕ್ಷನ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ
ಅದೇ ರೀತಿ ಸಾರ್ವಜನಿಕರು ಹಾಗೂ ಮೀನುಗಾರರು ಈ ಅವಧಿಯಲ್ಲಿ ಸಮುದ್ರ ಪ್ರದೇಶಗಳಿಗೆ ಹೋಗಬಾರದು. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ಅಥವಾ ನೀರಿನ ಪ್ರದೇಶಗಳಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಾರದು. ಮಕ್ಕಳನ್ನು ಸಮುದ್ರತೀರ ಪ್ರದೇಶಗಳಿಗೆ ಕಳುಹಿಸಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು 24×7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08382-229857 ಅಥವಾ ವಾಟ್ಸಾಪ್ ಸಂಖ್ಯೆ 9483511015 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





