ಗ್ರಾಮೀಣ ಜನತೆ, ಅಶಕ್ತರು, ಮಹಿಳೆ ಮತ್ತು ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಸುಲಭವಾಗಿ ಕಾನೂನು ಸೇವೆ ಹಾಗೂ ನೆರವು ಒದಗಿಸಲು ಕಾರವಾರದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಒಂದು ವರ್ಷದ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ ಎಂ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿಕ್ಷಕರು, ನಿವೃತ್ತ ಶಿಕ್ಷಕರು, ಮಾಜಿ ಪಂಚಾಯತ್ ಸದಸ್ಯರು, ಸರ್ಕಾರದ ವಿವಿಧ ಇಲಾಖೆಯಿಂದ ನಿವೃತ್ತರಾದ ನೌಕರರು, ಹಿರಿಯ ನಾಗರಿಕರು, ಕಾನೂನು ಸೇವೆಗಳಲ್ಲಿ ತೊಡಗಿರುವ ಸಮಾಜ ಸೇವಕರು, ಮಹಿಳೆಯರು, ಟ್ರಾನ್ಸ್‌ಜೆಂಡರ್‌ಗಳು, ಪಂಗಡ ಸಮುದಾಯದವರು, ಅಲ್ಪಸಂಖ್ಯಾತರು, ಗೌರವಾನ್ವಿತ ವ್ಯಕ್ತಿಗಳು, ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು ಅಥವಾ ಚಿಕಿತ್ಸಕರು, ವಿದ್ಯಾರ್ಥಿಗಳು ಮತ್ತು ಕಾನೂನು ವಿದ್ಯಾರ್ಥಿಗಳು (ವಕೀಲರಾಗಿ ನೋಂದಣಿ ಹೊಂದುವವರೆಗೆ), ರಾಜಕೀಯೇತರ ಸೇವಾ ಮನೋಭಾವ ಹೊಂದಿರುವ ಎನ್‌ಜಿಒ ಹಾಗೂ ಕ್ಲಬ್ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಮೈತ್ರಿ ಸಂಘಗಳು, ಉತ್ತಮ ವರ್ತನೆ ಹೊಂದಿರುವ ದೀರ್ಘಾವಧಿ ಶಿಕ್ಷೆ ಅನುಭವಿಸುತ್ತಿರುವ ಶಿಕ್ಷಣ ಪಡೆದ ಕೈದಿಗಳು, ಮೃತ ರಕ್ಷಣಾ ಸಿಬ್ಬಂದಿಯ ವಿಧವೆಯರು, ಮಾಜಿ ಸೈನಿಕರು ಅಥವಾ ಅವರ ಅವಲಂಬಿತರು, ಪ್ರಸ್ತುತ ಸೇವೆಯಲ್ಲಿರುವ ರಕ್ಷಣಾ ಸಿಬ್ಬಂದಿಯ ಪತ್ನಿ ಅಥವಾ ವಯಸ್ಕ ಮಕ್ಕಳು (ಕನಿಷ್ಠ 10ನೇ ತರಗತಿವರೆಗೂ ವ್ಯಾಸಂಗ ಮಾಡಿರುವವರು) ಸೇರಿದಂತೆ ಸುಮಾರು 50 ರಿಂದ 100 ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಉತ್ತರ ಕನ್ನಡ | ಭೂಮಿಗಾಗಿ ದಶಕಗಳ ಹೋರಾಟ; ಸೂರಿನ ನಿರೀಕ್ಷೆಯಲ್ಲಿ ಅರಣ್ಯ ವಾಸಿಗಳು
ಆಯ್ಕೆಯಾದ ಸ್ವಯಂ ಸೇವಕರಿಗೆ ಅಗತ್ಯ ತರಬೇತಿ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ. ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಚಟುವಟಿಕೆಗಳಲ್ಲಿ ಬೆಳಗ್ಗೆಯಿಂದ ಸಂಜೆತನಕ ಪಾಲ್ಗೊಂಡಲ್ಲಿ ರೂ.750 ಹಾಗೂ ಅರ್ಧ ದಿನ ಕಾರ್ಯನಿರ್ವಹಿಸಿದಲ್ಲಿ ರೂ.375 ಗೌರವಧನ ನೀಡಲಾಗುವುದು. ಜೊತೆಗೆ ಸಾರ್ವಜನಿಕ ಸಮಸ್ಯೆಗಳ ಬಗೆಹರಿಸುವ ಸಂಬಂಧ ಅವರಿಗೆ ತಗುಲುವ ಮೂಲ ಪ್ರಯಾಣ ವೆಚ್ಚವನ್ನು ಸಹ ನೀಡಲಾಗುತ್ತದೆ.
ಆಸಕ್ತರು ತಮ್ಮ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ಆವರಣ, ಕಾರವಾರ ಇವರಿಗೆ ಅಕ್ಟೋಬರ್ 10ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 08382-222990 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





