ಉತ್ತರ ಕನ್ನಡ: ಜನಗಣತಿಯು ರಾಷ್ಟ್ರದ ಅತ್ಯಂತ ಪ್ರಮುಖ ಮತ್ತು ಬೃಹತ್ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಜನಗಣತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಯಾವುದೇ ಯೋಜನೆಗಳನ್ನು ರೂಪಿಸಲು ಜನಗಣತಿಯ ಮಾಹಿತಿಯೇ ಆಧಾರವಾಗಿರುತ್ತದೆ.
ಸರ್ಕಾರದ ಆಯವ್ಯಯ ಸಿದ್ಧಪಡಿಸಲು, ವಸತಿ, ಮೂಲಸೌಕರ್ಯ ಸೇರಿದಂತೆ ಸಾರ್ವಜನಿಕ ಸೇವೆಗಳ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ಅಂಕಿ-ಅಂಶಗಳು ಬಳಕೆಯಾಗುತ್ತವೆ. ಆದ್ದರಿಂದ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ನಿಖರವಾದ ಮಾಹಿತಿಯನ್ನು ನಮೂದಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ ? ದಾಂಡೇಲಿಯಲ್ಲಿ ಕರಗುತ್ತಿರುವ ಕಲರವ; ಪ್ರವಾಸಿಗರ ಅಬ್ಬರಕ್ಕೆ ಬೆದರಿದ ʼಹಾರ್ನ್‌ಬಿಲ್ʼ ಪಕ್ಷಿ ಪ್ರಭೇದ!
ದೇಶದ ಮೊದಲ ಡಿಜಿಟಲ್ ಜನಗಣತಿ: ಈ ಬಾರಿಯ ಜನಗಣತಿಯು ಸ್ವಾತಂತ್ರ್ಯಾನಂತರ ನಡೆಯುತ್ತಿರುವ 8ನೇ ಜನಗಣತಿಯಾಗಿದ್ದು, ವಿಶೇಷವಾಗಿ ಸಂಪೂರ್ಣ ಡಿಜಿಟಲ್ ಮೋಡ್‌ನಲ್ಲಿ ನಡೆಯುತ್ತಿರುವ ಮೊದಲ ಗಣತಿಯಾಗಿದೆ. ಇದಕ್ಕಾಗಿ ಪ್ರತ್ಯೇಕ ಆಪ್ ಸಿದ್ಧಪಡಿಸಲಾಗಿದ್ದು, ಸ್ಮಾರ್ಟ್ ಫೋನ್‌ಗಳ ಮೂಲಕವೇ ಪ್ರತಿ ಮನೆಯ ಸುಮಾರು 30 ಪ್ರಶ್ನೆಗಳಿಗೆ ಉತ್ತರಗಳನ್ನು ದಾಖಲಿಸಬೇಕಾಗುತ್ತದೆ.
ಗಣತಿ ಹಂತಗಳು: ಏಪ್ರಿಲ್ 1 ರಿಂದ 15ರವರೆಗೆ ಸಾರ್ವಜನಿಕರಿಗೆ ಸ್ವಯಂ ಗಣತಿಗೆ (Self-Enumeration) ಅವಕಾಶ, ಏಪ್ರಿಲ್ 16 ರಿಂದ ಮೇ 16ರವರೆಗೆ ಮನೆ ಪಟ್ಟಿ ಮಾಡುವ ಕ್ಷೇತ್ರ ಕಾರ್ಯ (Houselisting Operations).
ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಡಿಜಿಟಲ್ ಜನಗಣತಿಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಯಾವುದೇ ತಾಂತ್ರಿಕ ಸಮಸ್ಯೆಗಳು ಕಂಡುಬಂದಿಲ್ಲ. ಆದ್ದರಿಂದ ನಿಗದಿತ ಅವಧಿಯೊಳಗೆ ಈ ಬೃಹತ್ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರು ಮಾತನಾಡಿ, ಇಂತಹ ರಾಷ್ಟ್ರೀಯ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಧೀನ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಬೆಂಗಳೂರಿನ ಜನಗಣತಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಶಕ್ತಿ ಕುಮಾರ್ ಮಾತನಾಡಿ, “ಕೋವಿಡ್ ಕಾರಣದಿಂದ ಜನಗಣತಿ ವಿಳಂಬವಾಗಿದೆ. ಪ್ರಸ್ತುತ ಗಣತಿಯು ಆನ್‌ಲೈನ್‌ನಲ್ಲಿ ಇರುವುದರಿಂದ ಮಾಹಿತಿ ದಾಖಲಿಸಿದ ನಂತರ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
ಈ ಸುದ್ದಿ ಓದಿದ್ದೀರಾ ? ಜೊಯಿಡಾ | ರಾಮನಗರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ದಾಳಿ: 90 ಲಕ್ಷ ಮೌಲ್ಯದ ENA(ಸ್ಪಿರಿಟ್) ಜಪ್ತಿ, ಇಬ್ಬರ ಬಂಧನ
ಆದ್ದರಿಂದ ಗಣತಿದಾರರು ಅತ್ಯಂತ ಎಚ್ಚರಿಕೆಯಿಂದ ಮಾಹಿತಿ ಸಂಗ್ರಹಿಸಬೇಕು. ಈ ದತ್ತಾಂಶಗಳು ಮುಂದಿನ 10 ವರ್ಷಗಳ ಕಾಲ ದೇಶದ ಅಭಿವೃದ್ಧಿ ಯೋಜನೆಗಳಿಗೆ ದಿಕ್ಸೂಚಿಯಾಗಲಿವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಸ್ವಾಗತಿಸಿದರು. ಜಿಲ್ಲಾ ನೋಡಲ್ ಅಧಿಕಾರಿ ರಾಮ್ ಕುಮಾರ್, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.





