ಉತ್ತರ ಕನ್ನಡ: ತಮ್ಮ ದೀರ್ಘಕಾಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಘೋಷಣೆಗಳನ್ನು ಕೂಗುತ್ತಾ ಸಾಗಿದ ಕಾರ್ಯಕರ್ತೆಯರು, ಸರ್ಕಾರದ ವಿಳಂಬ ನೀತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಮುಖರಾದ ಭವಾನಿಶಂಕರ ಗೌಡ ಅವರು, ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ನೀಡಿದ್ದ ಭರವಸೆಗಳನ್ನು ಮರೆತಿದೆ ಎಂದು ಆರೋಪಿಸಿದರು. 2025ರ ಜನವರಿಯಲ್ಲಿ ನಡೆದ ಅಹೋರಾತ್ರಿ ಹೋರಾಟದ ಸಂದರ್ಭದಲ್ಲಿ ಮಾಸಿಕ 10,000 ರೂಪಾಯಿಗಳ ಕನಿಷ್ಠ ವೇತನದ ಭರವಸೆ ನೀಡಲಾಗಿತ್ತು.
ಅಲ್ಲದೆ, ಬಜೆಟ್‌ನಲ್ಲಿ ಗೌರವಧನ ಹೆಚ್ಚಳದ ಭರವಸೆ ನೀಡಿದ್ದರೂ ಮತ್ತು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಗೌರವಧನವನ್ನು 8,000 ರೂಪಾಯಿಗೆ ಏರಿಸುವ ಭರವಸೆ ನೀಡಿ 14 ತಿಂಗಳು ಕಳೆದರೂ ಈವರೆಗೂ ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ ಎಂದು ಅವರು ದೂರಿದರು. ಸೇವೆಯಿಂದ ಬಿಡುಗಡೆಗೊಂಡವರಿಗೆ ಗ್ರೂಪ್ ‘ಡಿ’ ಹುದ್ದೆ ನೀಡುವ ಭರವಸೆಯೂ ಇನ್ನೂ ಈಡೇರಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ ? ದಾಂಡೇಲಿಯಲ್ಲಿ ಕರಗುತ್ತಿರುವ ಕಲರವ; ಪ್ರವಾಸಿಗರ ಅಬ್ಬರಕ್ಕೆ ಬೆದರಿದ ʼಹಾರ್ನ್‌ಬಿಲ್ʼ ಪಕ್ಷಿ ಪ್ರಭೇದ!
ಸಂಘದ ಜಿಲ್ಲಾಧ್ಯಕ್ಷೆ ಪದ್ಮಾವತಿ ಚಲವಾದಿ ಮಾತನಾಡಿ, ಕರೋನಾ ಅಂತಹ ಕಠಿಣ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಪರಿಶ್ರಮಕ್ಕೆ ಸರ್ಕಾರ ಸೂಕ್ತ ಬೆಲೆ ನೀಡುತ್ತಿಲ್ಲ. ಕೇವಲ ಭರವಸೆಗಳಿಂದ ಹೊಟ್ಟೆ ತುಂಬುವುದಿಲ್ಲ, ಸರ್ಕಾರ ಕೂಡಲೇ ತನ್ನ ವಾಗ್ದಾನವನ್ನು ಈಡೇರಿಸಬೇಕು.
ಒಂದು ವೇಳೆ ಸರ್ಕಾರ ಮೌನ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯ ಅಂತ್ಯದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸಂಗೀತಾ, ಶ್ವೇತಾ ಕಪಟ್ಕರ್, ನಿವೇದಿತಾ, ಪ್ರಭಾಮಣಿ ಜೈನ್, ಚಂದ್ರಕಲಾ ನಾಯ್ಕ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.





