ಉತ್ತರ ಕನ್ನಡ: ಕಾರ್ಮಿಕರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದ ಅರ್ಹ ಕಾರ್ಮಿಕರಿಗೆ ವಿವಿಧ ವಿಭಾಗಗಳ ಸುರಕ್ಷಾ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಗೌಂಡಿ, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ವೆಲ್ಡಿಂಗ್, ಪ್ಲಂಬರ್ ಹಾಗೂ ಪೇಂಟರ್‌ಗಳು ಸೇರಿದಂತೆ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗಾಗಿ ಅಗತ್ಯವಾದ ಸುರಕ್ಷತಾ ಉಪಕರಣಗಳನ್ನು ಒಳಗೊಂಡ ಕಿಟ್‌ಗಳನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ. ಕೆಲಸದ ಜಾಗದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ಹಾಗೂ ಕಾರ್ಮಿಕರ ಜೀವ-ಆರೋಗ್ಯದ ರಕ್ಷಣೆಗೆ ಈ ಕಿಟ್‌ಗಳು ಮಹತ್ವದ್ದಾಗಿದ್ದು, ಸರ್ಕಾರದ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ವಿತರಣೆಯಾಗಲಿದೆ.
ಅರ್ಹ ಫಲಾನುಭವಿಗಳು ತಮ್ಮ ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ ಹಾಗೂ ಆಧಾರ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 25 ರೊಳಗಾಗಿ ಯಲ್ಲಾಪುರ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಿಲ್ಲೆಯಲ್ಲಿ ಆರು ಸಂಚಾರಿ ಆರೋಗ್ಯ ಘಟಕಗಳ ಸೇವೆ ಶೀಘ್ರದಲ್ಲೇ ಪ್ರಾರಂಭ
ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಕಾರ್ಮಿಕ ಇಲಾಖೆ ಪರಿಶೀಲನೆಗೆ ಒಳಪಡಿಸಿ, ಅರ್ಹರ ಪಟ್ಟಿಯನ್ನು ಜೇಷ್ಠತಾ ಆಧಾರದ ಮೇಲೆ ಅಂತಿಮಗೊಳಿಸಲಾಗುವುದು. ಆಯ್ಕೆಯಾದ ಫಲಾನುಭವಿಗಳಿಗೆ ಸುರಕ್ಷಾ ಕಿಟ್‌ಗಳನ್ನು ಹಂತ ಹಂತವಾಗಿ ವಿತರಿಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಯಲ್ಲಾಪುರ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು.





