ಉತ್ತರ ಕನ್ನಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಗವಾನ್ ಶ್ರೀ ಬಿರ್ಸಾಮುಂಡಾ ಜಯಂತಿ ಹಾಗೂ ಜನಜಾತೀಯ ಗೌರವ ದಿವಸ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರೀಯಾ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ದಿಲೀಶ್ ಶಶಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಕಾಡಿನಂಚಿನಲ್ಲಿ ಉಳಿದು ಕಾಡಿನ ಪ್ರಾಣಿಗಳ ಮತ್ತು ನಿಸರ್ಗದೊಂದಿಗೆ ಬದುಕಿ, ತಮ್ಮ ನಿರ್ದಿಷ್ಟ ಪ್ರದೇಶಗಳ ಹಕ್ಕಿಗಾಗಿ ಬ್ರಿಟಿಷರ ಬಂದೂಕಿನ ಎದುರು ತನ್ನ ಬಿಲ್ಲು ಬಾಣದೊಂದಿಗೆ ಹೋರಾಡಿದ ಬುಡಕಟ್ಟು ಸಮುದಾಯದ ನಾಯಕನಾಗಿದ್ದ ಬಿರ್ಸಾ ಮುಂಡಾ ಅವರ ಜಯಂತಿಯನ್ನು ದೇಶದ್ಯಾಂತ ಆಚರಿಸಲಾಗುತ್ತಿದೆ, ಬುಡಕಟ್ಟು ಸಮುದಾಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ಎಂದರು. ಜಿಲ್ಲೆಯ ಸಿದ್ದಿ ಜನಾಂಗದವರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡೆದು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಮುಂದಿನ ದಿನದಲ್ಲಿ ಸಿದ್ದಿ ಸಮುದಾಯದ ಮಕ್ಕಳು ಬಿರ್ಸಾ ಮುಂಡಾರವರಂತೆ ಸಮಾಜಕ್ಕೆ, ತಮ್ಮ ಜನಗಳಿಗೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತರಾಗ ಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಹನಮಾಪುರದಲ್ಲಿ ಮನೆಗೆ ಬೆಂಕಿ: ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆ ಸಾವು
ಬಿರ್ಸಾ ಮುಂಡಾರವರ ಕುರಿತು ಉಪನ್ಯಾಸ ನೀಡಿದ ಸೂರ್ಯ ಪುಟ್ಟಸಿದ್ದಿ ಮಾತನಾಡಿ, ಅತಂತ್ಯ ಕಡು ಬಡತನದಲ್ಲಿ ಆದಿವಾಸಿ ಕುಟುಂಬದಲ್ಲಿ ಜನಿಸಿದ ಬಿರ್ಸಾ ಮುಂಡಾ ರವರು ಕೊಳಲು ನುಡಿಸುತ್ತಾ ಜನರನ್ನು ತನ್ನತ್ತಾ ಆಕರ್ಷಿಸುವ ಅಭೂತಪೂರ್ವ ಶಕ್ತಿ ಹೊಂದಿದ್ದರು, ದೂರದೃಷ್ಠಿ ಉಳ್ಳವರಾಗಿದ್ದ ಮುಂಡಾರವರು ಬುಡಕಟ್ಟು ಜನಾಂಗದ ಕಲೆ, ಸಂಸ್ಕೃತಿ, ಅಚಾರ ವಿಚಾರಗಳು ನಶಿಸುವುದನ್ನು ತಡೆದು, ಬ್ರೀಟಿಷರ ದಬ್ಬಾಳಿಕೆ ವಿರೋಧಿಸಿ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದರು. “ಉಳುವವನೇ ಭೂಮಿಯ ಒಡೆಯನಾಗಬೇಕು ಎಂದು ಘೋಷಣೆ ಕೂಗಿ, ಗೇರಿಲ್ಲಾ ಯುದ್ದ ತಂತ್ರದಿಂದ ಬ್ರೀಟಿಷರ ವಿರುದ್ದ ಹೋರಾಡಿದರು. ಬಿರ್ಸಾಮುಂಡಾರವರ ಹೆಸರಿನಲ್ಲಿ ರಾಂಚಿಯಲ್ಲಿ ವಿಮಾನ ನಿಲ್ದಾಣ, ಕೃಷಿ ಕಾಲೇಜು, ಆಟದ ಮೈದಾನಗಳಿವೆ. ಇವರ ಜನ್ಮದಿನವನ್ನು ಜಾಖಂರ್ಡನ ಸಂಸ್ಥಾಪನ ದಿನ ಎಂದು ಕರೆಯುತ್ತಾರೆ ಎಂದು ಮುಂಡಾರವರ ಸಾಧನೆ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್ ವೈ.ಕೆ. ಸಿದ್ದಿ ಸಮುದಾಯದವರು ಇತರರು ಉಪಸ್ಥಿತರಿದ್ದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ನಳಿನಿ ಸ್ವಾಗತಿಸಿದರು. ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕಿ ವಸಂತಲಕ್ಷ್ಮಿ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಸ್ವೀಕರಿಸಲಾಯಿತು. ಬುಡಕಟ್ಟು ಕಲಾ ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು..





