ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೆ ಮತ್ತೊಮ್ಮೆ ಅಚ್ಚರಿಯ ಲಾಟರಿ ಸಿಕ್ಕಂತಾಗಿದೆ. ಇಂದು ಬೆಳಗ್ಗೆ ಕಾರವಾರ ತಾಲೂಕಿನ ದೇವಭಾಗ್ ಕಡಲತೀರದಲ್ಲಿ ಆಶ್ಚರ್ಯಕರ ದೃಶ್ಯವೊಂದು ಕಾಣಿಸಿಕೊಂಡಿದೆ. ಇಂದು ಸಮುದ್ರದ ಅಲೆಗಳು ತನ್ನ ಜೊತೆ ಮೀನುಗಳ ದೊಡ್ಡ ಗುಂಪನ್ನೇ ದಡಕ್ಕೆ ತಂದು ಹಾಕಿದೆ.
ಈ ಅಪರೂಪದ ಘಟನೆ ಸ್ಥಳೀಯರಲ್ಲಿ, ವಿಶೇಷವಾಗಿ ಮೀನುಗಾರ ಸಮುದಾಯದಲ್ಲಿ, ಅಪಾರ ಸಂತೋಷ ಮತ್ತು ಸಂಭ್ರಮಕ್ಕೆ ಕಾರಣವಾಗಿದೆ. ಬೆಳಗಿನ ಜಾವ ಕಡಲತೀರದಲ್ಲಿ ನೂರಾರು ಮೀನುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ದಡದಲ್ಲಿ ಬಿದ್ದಿರುವುದನ್ನು ಕಂಡ ದೇವಭಾಗ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಕ್ಷಣವೇ ಬೀಚ್ ಕಡೆ ಧಾವಿಸಿದರು.
ಯುವಕರು, ಮಹಿಳೆಯರು, ಮಕ್ಕಳು ಎನ್ನದೆ ಪ್ರತಿಯೊಬ್ಬರೂ ಬಲೆಗಳು, ಬುಟ್ಟಿಗಳು, ಬಟ್ಟೆಗಳು ಕೈಗೆ ಸಿಕ್ಕಿದರಲ್ಲಿ ಮೀನುಗಳನ್ನು ಹಿಡಿಯಲು ಮುಂದಾದರು. ಕೆಲವರು ಬರಿಗೈಯಲ್ಲೇ ಮೀನು ಹಿಡಿದು ಸಂತೋಷದಿಂದ ಬುಟ್ಟಿಯಲ್ಲಿ ತುಂಬಿಕೊಂಡರು.ಕೆಲವೇ ಗಂಟೆಗಳಲ್ಲಿ ಕಡಲತೀರ ಬಹುತೇಕ ಖಾಲಿಯಾಗಿದ್ದು, ಗ್ರಾಮಸ್ಥರು ಕೈತುಂಬಾ ಮೀನುಗಳನ್ನು ಮನೆಗೆ ಕೊಂಡೊಯ್ದರು.
ಈ ಸುದ್ದಿ ಓದಿದ್ದೀರಾ?: ಹೊನ್ನಾವರ | ಬಸ್ಸಿನಲ್ಲಿ ಚಿನ್ನಾಭರಣ ಕಳವು ಮಾಡಿದ ಮಹಿಳೆ ಬಂಧನ; ₹1 ಲಕ್ಷ ಮೌಲ್ಯದ ಸ್ವತ್ತು ವಶ
ಕೆಲವರು ಸ್ವಂತ ಬಳಕೆಗೆ ಮೀನು ಇಟ್ಟುಕೊಂಡರೆ, ಇತರರು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧತೆ ಆರಂಭಿಸಿದರು.ಕಳೆದ ವಾರ ಅಂಕೋಲಾ ತಾಲ್ಲೂಕಿನ ಹಾರ್ವಾಡ ಕಡಲತೀರದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಇದೀಗ ದೇವಭಾಗ್ ಬೀಚ್‌ನಲ್ಲಿ ಎರಡನೇ ಬಾರಿ ಮೀನುಗಳ ರಾಶಿ ದಡಕ್ಕೆ ತಲುಪಿರುವುದು, ಈ ಭಾಗದ ಮೀನುಗಾರರಿಗೆ “ಶುಭಸಂಕೇತ”ವೆಂದು ಸ್ಥಳೀಯ ಮೀನುಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.





