ಉತ್ತರ ಕನ್ನಡ: ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಅನುಮತಿ ಪಡೆಯದೆ ನಿರ್ಮಿಸಿದ್ದ ಬಡಾವಣೆಗಳ ನಿವೇಶನಗಳ ನೋಂದಣಿ-ಮಾರಾಟವನ್ನು ರದ್ದುಪಡಿಸಿದ್ದ ಬಳಿಕ, ಇದೀಗ ಡಿ.1 ರಿಂದ ಇ-ಸ್ವತ್ತು ತಂತ್ರಾಂಶದ ಮೂಲಕ 11ಎ ಮತ್ತು 11ಬಿ ಪ್ರಮಾಣಪತ್ರ ವಿತರಣೆಗೆ ಮುಂದಾಗಿದೆ.
ಈ ಅಭಿಯಾನ ಮಾದರಿಯ ಕಾರ್ಯಕ್ರಮವು ಆಸ್ತಿ ನೋಂದಣಿ ಮಾರಾಟಕ್ಕೆ ಅನುಮತಿ ಒದಗಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದ್ದರೂ, ಅರಣ್ಯ ಭೂಮಿ ಮತ್ತು ಕರಾವಳಿ ನಿಯಂತ್ರಣ ವಲಯ (CRZ) ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಯಮಾವಳಿಗಳ ಜಟಿಲತೆಯಿಂದಾಗಿ ಈ ಪ್ರಕ್ರಿಯೆಗೆ ದೊಡ್ಡ ತಾಂತ್ರಿಕ ಅಡಚಣೆಗಳು ಎದುರಾಗಿವೆ.
ಜಿಲ್ಲೆಯ ಕರಾವಳಿ ಭಾಗದಲ್ಲಿ ಸಿಆರ್‌ಝಡ್ ವ್ಯಾಪ್ತಿ ಮತ್ತು ಅರಣ್ಯ ಭೂಮಿ ಹೆಚ್ಚಿರುವ ಕಾರಣದಿಂದಾಗಿ, ಇ-ಸ್ವತ್ತು ನೀಡಲು ಕಾರ್ಯಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಿಯಮಾವಳಿ ಮಾರ್ಗಸೂಚಿಗಳಲ್ಲಿನ 47 ಅಂಶಗಳಿಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ಪಡೆಯಲು ಆಸ್ತಿಯು ಈಗಾಗಲೇ ನೋಂದಣಿಯಾಗಿರಬೇಕು ಅಥವಾ ಮನೆಯನ್ನು ನಿರ್ಮಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಮೂರು ತಿಂಗಳ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ಶಾಖೆಯ ಅಂಕಿ-ಅಂಶಗಳು ಕಳವಳಕಾರಿ ಚಿತ್ರಣವನ್ನು ನೀಡಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮನೆ, ವಾಣಿಜ್ಯ ಹಾಗೂ ಸರ್ಕಾರಿ ಕಟ್ಟಡಗಳು ಸೇರಿ ಒಟ್ಟು 3,56,531 ಆಸ್ತಿಗಳು ಇವೆ. ಆದರೆ, ಈ ಪೈಕಿ ಕೇವಲ 37,612 ಆಸ್ತಿಗಳು ಮಾತ್ರ 11ಬಿ ಪ್ರಮಾಣಪತ್ರ ಪಡೆದಿವೆ. 12,263 ಆಸ್ತಿಗಳು ಮಾತ್ರ 11ಎ ಮತ್ತು 11ಬಿ ಎರಡೂ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗಿದೆ. ಒಟ್ಟಾರೆ ಆಸ್ತಿಗಳ ಪೈಕಿ ಕೇವಲ ಶೇ 13.98 ರಷ್ಟು ಆಸ್ತಿಗಳು ಮಾತ್ರ ಇ-ಸ್ವತ್ತಿನಲ್ಲಿ ನೋಂದಣಿಯಾಗಿವೆ.
ಇ-ಸ್ವತ್ತು ನೋಂದಣಿಯಾಗದೆ ಉಳಿದಿರುವ ಈ ಬಹುಪಾಲು ಆಸ್ತಿಗಳನ್ನು ಸದ್ಯಕ್ಕೆ ಅಕ್ರಮ ಆಸ್ತಿಗಳು ಎಂದೇ ಪರಿಗಣಿಸಲಾಗುತ್ತಿದೆ. ಪರಿಣಾಮವಾಗಿ, ಜಿಲ್ಲೆಯ ಗ್ರಾಮೀಣ ಭಾಗದ ಬಹುತೇಕ ಆಸ್ತಿಗಳು ಅನಧಿಕೃತವೆಂದು ಗುರುತಿಸಲ್ಪಡುತ್ತಿವೆ. ಇ-ಸ್ವತ್ತು ನೋಂದಣಿ ಇಲ್ಲದಿರುವುದರಿಂದ ಗ್ರಾಮೀಣ ಜನರಿಗೆ ಹಲವಾರು ರೀತಿಯ ತೊಂದರೆಗಳು ಎದುರಾಗಿವೆ ಇ-ಸ್ವತ್ತು ಇಲ್ಲದೆ ಯಾವುದೇ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ, ಆಸ್ತಿ ದಾಖಲೆಗಳ ಕೊರತೆಯಿಂದಾಗಿ ಬ್ಯಾಂಕ್ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ, ಶೌಚಗೃಹ ಮತ್ತು ವಸತಿ ಯೋಜನೆಯಡಿ ಮನೆಗಳನ್ನು ಪಡೆಯಲು ಜನರಿಗೆ ಅಡಚಣೆಯಾಗಿದೆ.
ಈ ಸುದ್ದಿ ಓದಿದ್ದೀರಾ ? ಅಂಕೋಲಾ | ತೋಟದಲ್ಲಿ ವಿಷದ ಹಾವು ಕಚ್ಚಿ 39 ವರ್ಷದ ಮಹಿಳೆ ಸಾವು
ಜಿಲ್ಲೆಯಲ್ಲಿ ಇ-ಸ್ವತ್ತು ನೋಂದಣಿ ಪ್ರಕ್ರಿಯೆಯು ತಾಲ್ಲೂಕುವಾರು ದೊಡ್ಡ ವ್ಯತ್ಯಾಸವನ್ನು ಕಂಡಿದೆ. ಉದಾಹರಣೆಗೆ, ಶಿರಸಿ ತಾಲ್ಲೂಕು ಒಟ್ಟು 47,405 ಗ್ರಾಮೀಣ ಆಸ್ತಿಗಳಲ್ಲಿ 10,723 ಆಸ್ತಿಗಳೊಂದಿಗೆ ಅತಿ ಹೆಚ್ಚು ಇ-ಸ್ವತ್ತು ನೋಂದಣಿ ಹೊಂದಿದೆ. ಆದರೆ, ಸಿದ್ದಾಪುರ, ಜೊಯಿಡಾ ಮತ್ತು ದಾಂಡೇಲಿ, ಮುಂಡಗೋಡ ತಾಲ್ಲೂಕುಗಳಂತಹ ಪ್ರದೇಶಗಳಲ್ಲಿ ನೋಂದಣಿಯಾದ ಆಸ್ತಿಗಳ ಸಂಖ್ಯೆಗಳು ಕ್ರಮವಾಗಿ 1,707, 1,579 ಮತ್ತು 541, 3476 ರಷ್ಟು ಮಾತ್ರ ಇವೆ.
ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ನೆರವಾಗಲು, ರಾಜ್ಯ ಸರ್ಕಾರವು ನಿಯಮಾವಳಿಗಳನ್ನು ಸರಳೀಕರಿಸಿ ಅರಣ್ಯ ಮತ್ತು ಸಿಆರ್‌ಝಡ್ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೂ ಇ-ಸ್ವತ್ತು ಪಡೆಯಲು ಅಗತ್ಯವಿರುವ ಮಾರ್ಗಸೂಚಿಗಳನ್ನು ತುರ್ತಾಗಿ ಪ್ರಕಟಿಸಬೇಕಿದೆ.





