ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ನೂರಾನಿ ಕ್ರಾಸ್‌ನಲ್ಲಿರುವ ಎಸ್‌ಡಿಪಿಐ (SDPI) ಕಚೇರಿಯಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಎಸ್‌ಡಿಪಿಐ ಚಂದಾವರ ಶಾಖೆ ಹಾಗೂ ನವೀನ್ ನೇತ್ರಾಲಯ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಶಿಬಿರವು ಸ್ಥಳೀಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವರದಾನವಾಗಿ ಪರಿಣಮಿಸಿತು. ಈ ವಿಶೇಷ ಆರೋಗ್ಯ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.
ಶಿಬಿರಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಿದ್ದಲ್ಲದೆ, ಅಗತ್ಯವಿದ್ದವರಿಗೆ ಉಚಿತವಾಗಿ ಕಣ್ಣಿನ ಔಷಧಿಗಳು ಮತ್ತು ಐ ಡ್ರಾಪ್ಸ್‌ಗಳನ್ನು ವಿತರಿಸಲಾಯಿತು. ಅಷ್ಟೇ ಅಲ್ಲದೆ, ದೃಷ್ಟಿ ದೋಷವಿರುವ ಫಲಾನುಭವಿಗಳಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕಗಳನ್ನು ನೀಡುವ ಮೂಲಕ ಸಂಘಟನೆಯು ಸಾಮಾಜಿಕ ಕಳಕಳಿ ಮೆರೆಯಿತು.
ನುರಿತ ವೈದ್ಯರು ರೋಗಿಗಳಿಗೆ ಸೂಕ್ತ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಈ ಶಿಬಿರದಲ್ಲಿ ವೈದ್ಯಕೀಯ ತಂಡದ ನೇತೃತ್ವವನ್ನು ಡಾ. ನವೀನ್ ಕುಮಾರ್ ಹಾಗೂ ಡಾ. ಮೇಘಾ ದೇವಾಕರ್ ಅವರು ವಹಿಸಿಕೊಂಡು ರೋಗಿಗಳನ್ನು ತಪಾಸಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ-ಅಂಕೋಲಾ ಕ್ಷೇತ್ರ ಜೆಡಿಎಸ್ ಪಾಲಾಗದು: ಮೈತ್ರಿ ವದಂತಿಗಳಿಗೆ ಬಿಜೆಪಿ ವಕ್ತಾರ ಮೊಗಟಾ ತಿರುಗೇಟು
ಕಾರ್ಯಕ್ರಮದಲ್ಲಿ ಕುಮಟಾ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷರಾದ ರಫೀಕ್ ಹೆಮ್ಮಕ್ಕಿ, ಉಪಾಧ್ಯಕ್ಷರಾದ ತೌಸೀಫ್ ಸಿಕಂದರ್, ಚಂದಾವರ ಶಾಖಾ ಅಧ್ಯಕ್ಷರಾದ ರಫೀಕ್ ಶೈಖ್, ಶಾಖಾ ಕಾರ್ಯದರ್ಶಿ ಮಹ್ಮೂದ್ ಸಾಬ್ ಸೇರಿದಂತೆ ಪ್ರಮುಖರಾದ ಸಹೀಮ್ ಹೊನ್ನಾವರ, ಸುಫಿಯಾನ್ ಹೆಮ್ಮಕ್ಕಿ ಹಾಗೂ ಸಂಘಟನೆಯ ಇತರ ಕಾರ್ಯಕರ್ತರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಶ್ರಮಿಸಿದರು.





