ಉತ್ತರ ಕನ್ನಡ: ಜಿಲ್ಲೆಯ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಹಿತರಕ್ಷಣೆ ಮತ್ತು ಮೂಲಸೌಕರ್ಯಗಳ ಒದಗಿಸುವಿಕೆಯಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆ ಸಲ್ಲದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ‘ಗೃಹಭಾಗ್ಯ’ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ಕೂಡಲೇ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು.
ಈ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹೆಚ್ಚಿನ ಗಮನ ಹರಿಸುವಂತೆ ಅವರು ನಿರ್ದೇಶನ ನೀಡಿದರು. ಮನೆಗಳ ನಿರ್ಮಾಣಕ್ಕೆ ಜಾಗದ ಕೊರತೆಯಿದ್ದರೆ ಕೂಡಲೇ ಆಯಾ ತಾಲೂಕಿನ ತಹಸೀಲ್ದಾರ್‌ಗಳನ್ನು ಸಂಪರ್ಕಿಸಿ ಕಂದಾಯ ಭೂಮಿ ಪಡೆದುಕೊಳ್ಳಬೇಕು. ಒಂದು ವೇಳೆ ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಪರ್ಯಾಯ ನಿವೇಶನಗಳನ್ನು ಗುರುತಿಸಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಮನುಷ್ಯರಿಂದ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ‘ಸಕ್ಕಿಂಗ್ ಮತ್ತು ಜೆಟ್ಟಿಂಗ್’ ಯಂತ್ರಗಳನ್ನು ಬಳಸಬೇಕು. ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸುರಕ್ಷಾ ಪರಿಕರಗಳನ್ನು ಒದಗಿಸಬೇಕು ಮತ್ತು ಅವುಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು.
ಪೌರಕಾರ್ಮಿಕರಿಗೆ ಪ್ರತಿ ತಿಂಗಳು ನಿಗದಿತ ದಿನದಂದೇ ವೇತನ ಪಾವತಿಯಾಗಬೇಕು ಹಾಗೂ ಇ.ಎಸ್.ಐ ಮತ್ತು ಇ.ಪಿ.ಎಫ್ ಕಡಿತದ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು. ಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸಿ ನಿಗದಿತ ಸಮಯದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಮಾಸ್ಟರ್ ಹೆಲ್ತ್ ಚೆಕಪ್‌ಗಳನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ವರದಿಯಾದರೂ ಅಲುಗಾಡದ ಆಡಳಿತ: ಅಧಿಕಾರಿಗಳ ‘ಮೌನ’ಕ್ಕೆ ಕಾರಣವೇನು?
ಪ್ರತಿದಿನ ಉತ್ತಮ ಗುಣಮಟ್ಟದ ಪೌಷ್ಟಿಕಾಂಶವುಳ್ಳ ಉಪಹಾರ, ವಿಶ್ರಾಂತಿ ಗೃಹಗಳ ವ್ಯವಸ್ಥೆ ಹಾಗೂ ಸಂಕಷ್ಟ ಭತ್ಯೆಗಳನ್ನು ವಿತರಿಸುವ ಮೂಲಕ ಪೌರಕಾರ್ಮಿಕರ ಯೋಗಕ್ಷೇಮವನ್ನು ಕಾಪಾಡುವುದು ಆಯಾ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ವೈ.ಕೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





