ಉತ್ತರ ಕನ್ನಡ: ಕಾರವಾರ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಡಿ. 22 ರಿಂದ 28 ರವರೆಗೆ ನಡೆಯಲಿರುವ ಪ್ರತಿಷ್ಠಿತ ಕರಾವಳಿ ಉತ್ಸವ-2025 ನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ಸಿಗೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಎಲ್ಲ ಸಮಿತಿಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಉತ್ಸವಕ್ಕೆ ಅಗತ್ಯವಿರುವ ಅನುದಾನದ ಕುರಿತು ಮಾಹಿತಿ ನೀಡಿದ ಸಚಿವರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ. 1 ಕೋಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ. 5 ಕೋಟಿ ಅನುದಾನ ಬಿಡುಗಡೆಯಾಗಲಿದ್ದು, ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಮಂತ್ರಿಗಳು ತಾಕೀತು ಮಾಡಿದರು.
ಆಮಂತ್ರಣ ಪತ್ರಿಕೆಗಳನ್ನು ಶಿಷ್ಠಾಚಾರದಂತೆ ಅಂತಿಮಗೊಳಿಸಿ ಕೂಡಲೇ ಮುದ್ರಣ ಮಾಡುವಂತೆ ತಿಳಿಸಿದ ಸಚಿವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ತಾನೇ ಖುದ್ದು ಆಹ್ವಾನ ನೀಡಲಿದ್ದೇನೆ ಎಂದರು. ಜೊತೆಗೆ, ಶಿಷ್ಠಾಚಾರದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಆಮಂತ್ರಣ ಪತ್ರಿಕೆ ನೀಡಲು ಕ್ರಮವಹಿಸಬೇಕು ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಮತ್ತು ಅಧಿಕಾರಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಉತ್ಸವದಲ್ಲಿ ಭಾಗವಹಿಸುವ ಕಲಾವಿದರ ಕುರಿತು ಮಾಹಿತಿ ನೀಡಿದರು. ಇವೆಂಟ್ ಮ್ಯಾನೇಜ್‌ಮೆಂಟ್ ತಂಡವು ಅಂತಿಮಗೊಳಿಸಿರುವ ಪಟ್ಟಿಯಂತೆ, ಡಿ. 22 ರಂದು ಶಂಕರ್ ಮಹಾದೇವನ್, ಡಿ. 23 ರಂದು ಮೀಕಾ ಸಿಂಗ್, ಡಿ. 24 ರಂದು ಸೋನು ನಿಗಮ್, ಡಿ. 25 ರಂದು ರಫ್ತಾರ್, ಡಿ. 27 ರಂದು ಮಹಮ್ಮದ್ ದಾನೀಶ್ ಹಾಗೂ ಡಿ. 28 ರಂದು ದಲೇರಿ ಮೆಹಂದಿ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಡಿ. 26 ರ ಕಾರ್ಯಕ್ರಮಕ್ಕೆ ಕಲಾವಿದರನ್ನು ಅಂತಿಮಗೊಳಿಸಬೇಕಿದೆ ಎಂದರು. ಇನ್ನು, ಸ್ಥಳೀಯ ಕಲಾವಿದರಿಗೂ ಪ್ರತಿದಿನ ಸಂಜೆ 5.30 ರಿಂದ 7.30 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸುತ್ತಿರುವ ಎಲ್ಲರಿಗೂ ವೇದಿಕೆಯಲ್ಲಿ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಸ್ಪರ್ಧೆಗಳು ಮತ್ತು ಚಟುವಟಿಕೆಗಳ ಕುರಿತು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು ಮಾಹಿತಿ ನೀಡಿದರು. ಡಿ. 22 ರಂದು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವ ಗಣ್ಯರನ್ನು ಸ್ವಾಗತಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದ 15 ರಿಂದ 20 ಕಲಾ ತಂಡಗಳ ಮೆರವಣಿಗೆ, ಹಾಗೂ ಮೀನುಗಾರರ ದೀಪ ಮೆರವಣಿಗೆ ನಡೆಯಲಿದೆ.
ಡಿ. 23 ರಂದು ಛಾಯಾಗ್ರಹಣ ಮತ್ತು ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದ್ದು, ಆಯ್ಕೆಯಾದ ಛಾಯಾಚಿತ್ರ ಮತ್ತು ರೀಲ್ಸ್‌ಗಳನ್ನು ಅಂತಿಮ ದಿನದವರೆಗೆ ಪ್ರದರ್ಶಿಸಲಾಗುವುದು. ಇನ್ನು, ಡಿ. 24 ರಂದು ರಂಗೋಲಿ ಮತ್ತು ಅಡುಗೆ ಸ್ಪರ್ಧೆ, ಡಿ. 25 ರಂದು 3, 5 ಮತ್ತು 10 ಕಿ.ಮೀ ವಿಭಾಗಗಳಲ್ಲಿ ಮ್ಯಾರಥಾನ್ ಮತ್ತು ಕರಾವಳಿ ರನ್ ಸ್ಪರ್ಧೆ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ತೋಟದಲ್ಲಿ ವಿಷದ ಹಾವು ಕಚ್ಚಿ 39 ವರ್ಷದ ಮಹಿಳೆ ಸಾವು
ಡಿ. 26 ರಂದು ಹಗ್ಗ ಜಗ್ಗಾಟ, ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆ ಮತ್ತು ಡಿ. 27 ರಂದು ಶ್ವಾನ ಪ್ರದರ್ಶನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





