ಉತ್ತರ ಕನ್ನಡ: ಜಿಲ್ಲಾ ರಾಜಕೀಯದ ಇಬ್ಬರು ಪ್ರಭಾವಿ ನಾಯಕರಾದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ನಡುವಿನ ಶೀತಲ ಸಮರ ಈಗ ತಾರ್ಕಿಕ ಅಂತ್ಯದ ಬದಲು ‘ಪತ್ರ ಸಮರ’ದ ರೂಪ ಪಡೆದುಕೊಂಡಿದೆ.
ಕೆಡಿಪಿ ಸಭೆಯಲ್ಲಿ ಆರಂಭವಾದ ಅಸಮಾಧಾನ ಇದೀಗ ಜಿಲ್ಲಾ ವೈದ್ಯಾಧಿಕಾರಿಗಳ ಪತ್ರದ ಮೂಲಕ ಹೊಸ ತಿರುವು ಪಡೆದಿದೆ.
ಏನಿದು ಘಟನೆ? ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಅವರು ಜಿಲ್ಲೆಯಲ್ಲಿ ಔಷಧಿಗಳ ಕೊರತೆಯ ಬಗ್ಗೆ ಧ್ವನಿ ಎತ್ತಿದ್ದರು. ಆದರೆ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಸಚಿವ ಮಂಕಾಳ ವೈದ್ಯ ಅವರು, “ಯಾವುದೇ ಔಷಧಿ ಕೊರತೆಯಿಲ್ಲ” ಎಂದು ವಾದಿಸಿದ್ದಲ್ಲದೆ,

“ನಿಮ್ಮ ತಾಲೂಕಿನ ಸಮಸ್ಯೆ ಇದ್ದರೆ ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಚರ್ಚಿಸಿ” ಎಂದು ಅಧಿಕಾರಿಗಳ ಮುಂದೆಯೇ ಸೈಲ್ ಅವರಿಗೆ ಸೂಚಿಸಿದ್ದರು. ಸಚಿವರ ಈ ವರ್ತನೆಯಿಂದ ಅಸಮಾಧಾನಗೊಂಡ ಶಾಸಕರ ಸಭೆಯಿಂದ ಅರ್ಧಕ್ಕೇ ಹೊರನಡೆದಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡಕ್ಕೆ ಬಜೆಟ್ ಬಂಪರ್: ಕಾರವಾರದಲ್ಲಿ 100 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಘೋಷಣೆ
ಸಚಿವರಿಗೆ ಇಲಾಖೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂಬುದನ್ನು ಪರೋಕ್ಷವಾಗಿ ಸಾಬೀತುಪಡಿಸಲು ಶಾಸಕ ಸತೀಶ್ ಸೈಲ್ ಮುಂದಾಗಿದ್ದಾರೆ. ಕಾರವಾರದ ಹಳೆಯ ಜಿಲ್ಲಾ ಆಸ್ಪತ್ರೆಯು ಈಗ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಯೊಂದಿಗೆ ವಿಲೀನಗೊಂಡಿದೆ. ಈ ತಾಂತ್ರಿಕ ಕಾರಣದಿಂದಾಗಿ ಕಾರವಾರದಲ್ಲಿ ಪ್ರತ್ಯೇಕ ತಾಲೂಕು ಆಸ್ಪತ್ರೆಯೇ ಇಲ್ಲ.
ಆಸ್ಪತ್ರೆ ಇಲ್ಲದ ಮೇಲೆ ‘ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿ’ ಅಸ್ತಿತ್ವದಲ್ಲಿರಲು ಹೇಗೆ ಸಾಧ್ಯ? ಎಂಬ ಸತ್ಯವನ್ನು ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿಗಳ (DHO) ಮೂಲಕ ಅಧಿಕೃತ ಪತ್ರ ಬರೆಯಿಸಿ ಸಚಿವರಿಗೆ ತಲುಪಿಸಿದ್ದಾರೆ.
ಸಭೆಯಲ್ಲಿ “ನಾನು ಮಾಹಿತಿ ಇಲ್ಲದೆ ಮಾತನಾಡುವ ಅಂಗೂಟ ಛಾಪ್ ಅಲ್ಲ” ಎಂದು ಸೈಲ್ ಹೇಳಿದ್ದ ಮಾತುಗಳಿಗೆ ಪೂರಕವಾಗಿ ಈಗ ಈ ತಾಂತ್ರಿಕ ಮಾಹಿತಿಯ ಪತ್ರ ಬಿಡುಗಡೆಯಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಸಮಿತಿಯಲ್ಲಿ ಹೋಗಿ ಮಾತನಾಡಿ ಎಂದು ಹೇಳಿದ್ದ ಸಚಿವರಿಗೆ, ಸೈಲ್ ಅವರು ಸರಿಯಾದ ರೀತಿಯಲ್ಲೇ ತಾಂತ್ರಿಕ ಮಾಹಿತಿ ನೀಡಿ ಅರಿವು ಮೂಡಿಸಿದ್ದಾರೆ ಎಂಬ ಮಾತುಗಳು ಜಿಲ್ಲಾ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಒಟ್ಟಾರೆ, ಆಡಳಿತ ಪಕ್ಷದ ಇಬ್ಬರು ನಾಯಕರ ನಡುವಿನ ಈ ಮುಸುಕಿನ ಗುದ್ದಾಟ ಮತ್ತು ಪತ್ರ ಸಮರವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮತ್ತು ಗೊಂದಲವನ್ನು ಸೃಷ್ಟಿಸಿದೆ.





