ಉತ್ತರ ಕನ್ನಡ: ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ಜಿಲ್ಲೆಯ ಮುಂಡಗೋಡ ಮತ್ತು ಭಟ್ಕಳ ತಾಲ್ಲೂಕುಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಾರ್ವಜನಿಕರು ಲಂಚ, ವಿಳಂಬ ಹಾಗೂ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದಂತೆ ತಮ್ಮ ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 16 ರಂದು ಮುಂಡಗೋಡ ತಾಲೂಕಿಗೆ ಆಗಮಿಸುವ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ದೂರುಗಳನ್ನು ಸ್ವೀಕರಿಸಲಿದ್ದಾರೆ.
ಇದೇ ರೀತಿ ಡಿಸೆಂಬರ್ 19 ರಂದು ಭಟ್ಕಳದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದೂರು ಸ್ವೀಕರಣೆ ಮತ್ತು ಸ್ಥಳೀಯ ವಿಚಾರಣೆ ನಡೆಯಲಿದೆ.
ಯಾವ ವಿಷಯಗಳ ಬಗ್ಗೆ ದೂರು ಸಲ್ಲಿಸಬಹುದು? ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಭ್ರಷ್ಟಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸಲ್ಲಿಸಬಹುದು. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಡುವುದು. ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ ಮಾಡುವುದು. ಸರ್ಕಾರಿ ಹಣದ ದುರುಪಯೋಗ. ಸರ್ಕಾರಿ ಅಧಿಕಾರಿ/ನೌಕರರ ಕರ್ತವ್ಯ ಲೋಪ. ಕಳಪೆ ಕಾಮಗಾರಿ ನಿರ್ವಹಣೆ ವಿರುದ್ಧ ಅಧಿಕಾರಿಗಳಿಗೆ ದೂರನ್ನು ನೀಡಬಹುದಾಗಿದೆ.
ಸಾರ್ವಜನಿಕರು ಲೋಕಾಯುಕ್ತ ಕಾಯ್ದೆಯಡಿ ನಿಗಧಿತ ನಮೂನೆ-1 ಮತ್ತು 2 ರಲ್ಲಿ ತಮ್ಮ ದೂರುಗಳನ್ನು ಭರ್ತಿ ಮಾಡಿ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರುವ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ದೂರು ಸ್ವೀಕಾರದ ಬಳಿಕ ಅಧಿಕಾರಿಗಳು ಸ್ಥಳದಲ್ಲೇ ವಿಚಾರಣೆಯನ್ನು ನಡೆಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ ? ನನಸಾಗದ ʼಸ್ವಂತ ಮನೆʼ ಕನಸು; ಸಂಗ್ರಹಿಸಿದ ಶುಲ್ಕಕ್ಕೆ ಲೆಕ್ಕ ಕೊಡುವುದೇ ಗೃಹ ಮಂಡಳಿ?
ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಈ ಕುರಿತು ಪ್ರಕಟಣೆ ನೀಡಿದ್ದು, ಸಾರ್ವಜನಿಕರು ತಮ್ಮ ದೂರುಗಳು ಇದ್ದರೆ ಸಲ್ಲಿಸುವಂತೆ ತಿಳಿಸಿದ್ದಾರೆ.ಸಾರ್ವಜನಿಕರು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಕಛೇರಿಯ ದೂರವಾಣಿ ಸಂಖ್ಯೆಗಳಾದ 08382-295293, 220198, 222250, 222022, 229988 ಗೆ ಸಂಪರ್ಕಿಸಬಹುದು.





