ಉತ್ತರ ಕನ್ನಡ: ಕರ್ನಾಟಕ ಅಬಕಾರಿ ಕಾಯ್ದೆ-1965 ಅನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮತ್ತು ಅನಧಿಕೃತವಾಗಿ ಮದ್ಯ ಸೇವನೆಗೆ ಸ್ಥಳಾವಕಾಶ ಕಲ್ಪಿಸಿದ ಮೂವರು ಆರೋಪಿಗಳ ಮೇಲೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಒಂದೇ ದಿನ ಮೂರು ಪ್ರತ್ಯೇಕ ತಾಲ್ಲೂಕುಗಳಲ್ಲಿ ದಾಳಿ ನಡೆಸಿದ್ದಾರೆ.
ಕಾರವಾರ, ಭಟ್ಕಳ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿ ನಡೆದ ಈ ಕಾರ್ಯಾಚರಣೆಗಳಲ್ಲಿ, ಒಟ್ಟು ₹38,515/- ಮೌಲ್ಯದ ಅಕ್ರಮ ಮದ್ಯ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರವಾರದಲ್ಲಿ ಬೃಹತ್ ಜಪ್ತಿ: ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಶ್ರೀ ನೇಹಾಲ ಖಾನ್ ಅವರ ನೇತೃತ್ವದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ಸುಧೀರ ತಂದೆ ಕೃಷ್ಣ ಮಹಾಲೆ (53) ಎಂಬಾತನನ್ನು ಬಂಧಿಸಲಾಗಿದೆ. ಡಿಸೆಂಬರ್ 7, 2025 ರಂದು ಕಾರವಾರ ತಾಲ್ಲೂಕಿನ ಐಸ್ ಪ್ಯಾಕ್ಟರಿ, ಚೆಂಡಿಯಾದಲ್ಲಿ ಇವರು ಪರವಾನಗಿ ಇಲ್ಲದೆ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಯಿಂದ ₹38,515/- ಮೌಲ್ಯದ ಸರಾಯಿ ಪೌಚ್‌ಗಳು, ಬಾಟಲಿಗಳು, ಬಿಯರ್ ಟಿನ್‌ಗಳು ಮತ್ತು ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಕಲಂ 32 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ದಿನ, ಜಿಲ್ಲೆಯ ಇತರೆ ಎರಡು ತಾಲ್ಲೂಕುಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅನುವು ಮಾಡಿಕೊಡುತ್ತಿದ್ದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ, ಪೊಲೀಸ್ ಉಪ ನಿರೀಕ್ಷಕ ಶ್ರೀ ರನ್ನಗೌಡ ಪಾಟೀಲ್ ಅವರ ತಂಡವು ಭಟ್ಕಳ ತಾಲ್ಲೂಕಿನ ಹಾಡುವಳ್ಳಿ, ಕಿರಾಣಿ ಅಂಗಡಿ ಹಿಂಭಾಗದಲ್ಲಿ ದಯಾನಂದ ತಂದೆ ದುರ್ಗಯ್ಯ ಶೆಟ್ಟಿ (65) ಎಂಬಾತನು ಅನಧಿಕೃತವಾಗಿ ಮದ್ಯ ಕುಡಿಯಲು ಸ್ಥಳಾವಕಾಶ ನೀಡುತ್ತಿದ್ದಾಗ ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಗ್ನಿ ಅವಘಡ: ಅಂದಾಜು 50 ಲಕ್ಷ ರೂ. ನಷ್ಟ, ಘಟನಾ ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ
ಸ್ಥಳದಲ್ಲಿ ಖಾಲಿ ಮದ್ಯದ ಪೌಚ್‌ಗಳು ಮತ್ತು ಲೋಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆ: ಯಲ್ಲಾಪುರ ತಾಲ್ಲೂಕಿನ ಹುಲಗೋಡ ಗ್ರಾಮದ ಗೋಪಾಲ ತಂದೆ ಬಿಕ್ಕು ಮಿರಾಶಿ (42) ಎಂಬಾತನು ತನ್ನ ಮನೆಯ ಮುಂದಿನ ತಾತ್ಕಾಲಿಕ ಶೆಡ್‌ನಲ್ಲಿ ಮದ್ಯ ಸೇವನೆಗೆ ಅನುವು ಮಾಡಿಕೊಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಕಲಂ 15(ಎ) ಸಹಿತ 32(3) ಅಬಕಾರಿ ಕಾಯ್ದೆಯಡಿ ದೂರು ದಾಖಲಾಗಿದೆ.





