ಉತ್ತರ ಕನ್ನಡ: ಜಿಲ್ಲೆಯಲ್ಲಿ ವೀರ ವನಿತೆ ಓಬವ್ವನ ದಿನಾಚರಣೆಯನ್ನು ಜಿಲ್ಲಾಡಳಿತ ಸಹಯೋಗದೊಂದಿಗೆ ಆಚರಿಸಲಾಯಿತು. ಮನೆಯಲ್ಲಿದ್ದ ಒನೆಕೆಯನ್ನೇ ಆಯುಧವನ್ನಾಗಿ ಬಳಸಿಕೊಂಡು ಎದುರಾಳಿ ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದ್ದಾಳೆ. ಅವರ ಧೈರ್ಯ, ಶೌರ್ಯ ಮತ್ತು ಸಾಹಸ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.ಕಾರವಾರದ ಸೈಂಟ್ ಜೋಸೆಫ್ಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಓಬವ್ವ ಕೋಟೆಯಲ್ಲಿದ್ದ ಜನರನ್ನು ಹಾಗೂ ತಾವು ವಾಸಿಸುತ್ತಿದ್ದ ಸ್ಥಳವನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟರು ಎಂದು ಅವರು ಸ್ಮರಿಸಿದರು.
ಇಂತಹ ಮಹಾನೀಯರ ಜೀವನದ ಸಾಧನೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ಧೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್‌ಗಳಲ್ಲಿ ಮುಳುಗದೇ, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರಲ್ಲಿ ಹಾಗೂ ಸಾಮಾನ್ಯ ಜ್ಞಾನದ ಕಡೆ ಹೆಚ್ಚಿನ ಒತ್ತು ನೀಡಬೇಕು. ಓಬವ್ವ ನಂತಹ ಮಹಾನ್ ವ್ಯಕ್ತಿಗಳ ಜೀವನದ ಸಾಧನೆಯನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇತಿಹಾಸ ಸೃಷ್ಠಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬಹುದು ಎಂದರು.
ಅಂಕೋಲಾದ ಪಿಕಳೆ ಶಿಕ್ಷಣ ಮಹಾವಿದ್ಯಾಯಲಯದ ಉಪನ್ಯಾಸಕಿ ಡಾ. ಪುಷ್ಪಾ ನಾಯ್ಕ ಶೇಷಗಿರಿ ಅವರು ವೀರ ವನತೆ ಒನಕೆ ಓಬವ್ವನ ಕುರಿತು ಉಪನ್ಯಾಸ ನೀಡಿ, ಓಬವ್ವನ ಹೆಸರು ಕೇಳಿದರೇ ಸಾಕು ಇಂದಿಗೂ ಸ್ತ್ರೀ, ಪುರಷರಲ್ಲಿ ಸ್ಫೂರ್ತಿಯ ಚಿಲುಮೆ ಉಕ್ಕುತ್ತದೆ. ಸಾಮಾನ್ಯ ಮಹಿಳೆಯಾದ ಓಬವ್ವ ತನ್ನಲ್ಲಿದ ಆತ್ಮ ವಿಶ್ವಾಸ, ಧೈರ್ಯ, ಸಮಯ ಪ್ರಜ್ಞೆ ಮೆರೆದಿಂದರಿಂದ ಓಬವ್ವನ ಹೆಸರು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದೆ. ಹೈದರಾಲಿಯ ಸೈನಿಕರು ಕಿಂಡಿಯ ಮೂಲಕ ಕೋಟೆಗೆ ಆಕ್ರಮವಾಗಿ ನುಸುಳುವುದನ್ನು ಕಂಡ ಅವರು ಒನಕೆಯಿಂದಲೇ ಹೈದರಾಲಿಯ ಸೈನ್ಯವನ್ನು ಹೊಡೆದುರುಳಿಸಿದಳು. ಎದುರಾಳಿ ಸೈನ್ಯವು ನುಸುಳಿ ಬಂದ ಆ ಕಿಂಡಿಗೆ ಒನಕೆ ಓಬವ್ವನ ಕಿಂಡಿ ಎಂದು ಹೆಸರಿಡಲಾಗಿದೆ ಎಂದು ಇತಿಹಾಸ ಜ್ಞಾಪಿಸಿದರು.
ಓಬವ್ವನ ಸಾಹಸದ ಕಾರ್ಯಕ್ಕೆ ಮದಕರಿ ನಾಯಕ ಇನ್ನೊಂದು ಸುತ್ತು ಕೊಟೆಯನ್ನು ಕಟ್ಟಿಸಿದ್ದು, ಅದರ ಬಾಗಿಲಿಗೆ ಒನಕೆ ಕಿಂಡಿ ಬಾಗಿಲು ಎಂದು ಹೆಸರಿಡಲಾಗಿದೆ. ಓಬವ್ವ ಬರೀ ವ್ಯಕ್ತಿಯಲ್ಲ ಒಂದು ಶಕ್ತಿ, ಅವರೂ ಎಂದಿಗೂ ಆಜಾರಾಮರ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಮುಂತಾದದವರ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸೈಂಟ್ ಜೋಸೆಫ್ಸ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪಾಧರ್ ಡಾ. ಸ್ಯಾಂಡಿ ಪಿಂಟೋ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕನ್ನಡ ಸಂಸ್ಕೃತಿ ಇಲಾಖೆ ಮಂಗಲಾ ವೆಂ ನಾಯ್ಕ ಸ್ವಾಗತಿಸಿದರು. ಸೈಂಟ್ ಜೋಸೆಫ್ಸ್ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಜಯಶೀಲಾ ನಿರೂಪಿಸಿದರು. ವಿದ್ಯಾರ್ಥಿನಿ ಸಿಂಚನಾ ವಂದಿಸಿದರು.





