ರಾಜ್ಯ ಸರ್ಕಾರವು ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರೂ ಸೇರಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಕಾರ್ಯರೂಪಕ್ಕೆ ತರುವುದರ ಮೂಲಕ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಟಿ ನಾಯ್ಕ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಸರ್ಕಾರದ ಎರಡು ವರ್ಷಗಳ ಸಾಧನೆ, ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
“ಗೃಹಲಕ್ಷಿ ಯೋಜನೆಯ ಮೂಲಕ ಇಡೀ ರಾಜ್ಯದಲ್ಲಿ 1.20 ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದು 5 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 10 ಕೆಜಿಗೆ ಏರಿಸಿ ಬಡವರ ಹಸಿವನ್ನು ನೀಗಿಸಿದ್ದೆವೆ. ರಾಜ್ಯದಲ್ಲಿ ಅನೇಕ ಕುಟುಂಬಗಳಿಗೆ ಕರೆಂಟ್ ಬಿಲ್ ಕಟ್ಟದೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದ ಉದಾಹರಣೆಗಳಿದ್ದು, ರಾತ್ರಿವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿತ್ತು. ಆದ್ದರೆ ರಾಜ್ಯದ ಜನರಿಗೆ ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಿ ಸಮಸ್ಯೆ ಪರಿಹರಿಸಿದ್ದೇವೆ” ಎಂದರು.
“ರಾಜ್ಯದ ಎಲ್ಲ ಮಹಿಳೆಯಿಗೆ ಶಕ್ತಿ ಯೋಜನೆಯ ಮೂಲಕ ರಾಜ್ಯಾದ್ಯಂತ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದೇವೆ. ಪೋಷಕರು ತಮ್ಮ ಮಕ್ಕಳಿಗೆೆ ವಿದ್ಯಾಭ್ಯಾಸ ಕೊಡಿಸಿದ್ದಾರೆ, ಅದರೆ ಅವರಿಗೆ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಿರುವವರಿಗೆ ಯುವನಿಧಿ ನೀಡಿ ಅವರ ಕಷ್ಟ ಕಾಲದಲ್ಲಿ ನಮ್ಮ ಸರ್ಕಾರ ನಿಂತಿದೆ” ಎಂದು ಹೇಳಿದರು.
“ರಾಜ್ಯದಲ್ಲಿ ಗ್ಯಾರಂಟಿ ಯೋಜನಗಳಿಗೆ ಮಾತ್ರವಲ್ಲದೇ ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಕಳೆದ 2 ವರ್ಷದ ಅವಧಿಯಲ್ಲಿ ಸುಮಾರು ₹300 ಕೋಟಿಗೂ ಅಧಿಕ ಅನುದಾನದಲ್ಲಿ ವಿವಿಧ ಯೋಜನೆಗಳನ್ನು ಮಂಜೂರು ಮಾಡಿಸಲಾಗಿದೆ. ಜತೆಗೆ ಪ್ರಸ್ತುತ 50 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಶರಣರಿಗೆ ಜಾತಿ, ಶ್ರೀಮಂತಿಕೆ, ಬಡತನ ಮುಖ್ಯ ಆಗುವುದಿಲ್ಲ: ಮಲ್ಲಿಕಾರ್ಜುನ ಸ್ವಾಮೀಜಿ
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸತೀಶ್ ನಾಯ್ಕ, ಉಪಾಧ್ಯಕ್ಷ ನಾಗರಾಜ್ ಮುರುಡೇಶ್ವರ, ಶಿರಸಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಸುಮಾ ಉಗ್ರಣಕರ, ಉಪ ವಿಭಾಗಾಧಿಕಾರಿ ಕಾವ್ಯರಾಣಿ ಕೆ ಎಸ್, ಜಿಲ್ಲಾ ವಾರ್ತಾಧಿಕಾರಿ ಬಿ ಶಿವಕುಮಾರ್, ವಾ.ಕ.ರ.ಸಾ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣನವರ್ ಸೇರಿದಂತೆ ಇತರರು ಇದ್ದರು.





