ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಪುಣ್ಯಕ್ಷೇತ್ರ ಗೋಕರ್ಣದ ಪ್ರತಿಭೆಯೊಂದು ಮಹಿಳಾ ಕ್ರಿಕೆಟ್ ಲೋಕದ ದೊಡ್ಡ ವೇದಿಕೆಯಾದ ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರವೇಶಿಸುವ ಮೂಲಕ ನಾಡಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
2026ರ ಆವೃತ್ತಿಯ ಡಬ್ಲ್ಯೂಪಿಎಲ್ ಟೂರ್ನಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಗೋಕರ್ಣ ಮೂಲದ ಪ್ರತಿಭಾವಂತ ಕ್ರಿಕೆಟರ್ ಪ್ರತ್ಯೂಷಾ ಕುಮಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಮೂಲತಃ ಗೋಕರ್ಣದ ರಥಬೀದಿಯ ಜಂಭೆ ಮನೆತನಕ್ಕೆ ಸೇರಿದ ಪ್ರತ್ಯೂಷಾ ಅವರ ಈ ಸಾಧನೆಯು ಜಿಲ್ಲೆಯಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ. ಪ್ರಸ್ತುತವಾಗಿ ಬೆಂಗಳೂರಿನಲ್ಲಿ ನೆಲೆಸಿರುವ 26 ವರ್ಷದ ಪ್ರತ್ಯೂಷಾ ಕುಮಾರ್, ತಮ್ಮ 14ನೇ ವಯಸ್ಸಿನಲ್ಲೇ ಕ್ರಿಕೆಟ್ ಬದುಕನ್ನು ಆರಂಭಿಸಿದವರು.

ಕಠಿಣ ಪರಿಶ್ರಮ ಮತ್ತು ಆಟದ ಮೇಲಿನ ಅತೀವ ಆಸಕ್ತಿಯಿಂದಾಗಿ ಹಂತ ಹಂತವಾಗಿ ಬೆಳೆದ ಇವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮೈದಾನದಲ್ಲಿ ಚುರುಕಾದ ವಿಕೆಟ್ ಕೀಪಿಂಗ್ ಕೌಶಲ್ಯದ ಜೊತೆಗೆ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿರುವ ಇವರು ಆಕ್ರಮಣಕಾರಿ ಬಲಗೈ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ತಹಶೀಲ್ದಾರ್‌ಗಳ ಹೆಗಲಿಗೆ ಉಪವಿಭಾಗಗಳ ಹೊಣೆ; ಖಾಯಂ ಅಧಿಕಾರಿಗಳ ಕೊರತೆಯಿಂದ ಅಭಿವೃದ್ಧಿಗೆ ಅಡ್ಡಿ
ಇನ್ನು ಹರಾಜಿನ ಪ್ರಕ್ರಿಯೆಯಲ್ಲಿ ಪ್ರತ್ಯೂಷಾ ಅವರ ಪ್ರತಿಭೆಯನ್ನು ಗುರುತಿಸಿದ ಆರ್‌ಸಿಬಿ ಫ್ರಾಂಚೈಸಿಯು ಹತ್ತು ಲಕ್ಷ ರೂಪಾಯಿಗಳ ಮೊತ್ತ ನೀಡಿ ಒಪ್ಪಂದ ಮಾಡಿಕೊಂಡಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನೂ ಪದಾರ್ಪಣೆ ಮಾಡದ ‘ಅನ್‌ಕ್ಯಾಪ್ಡ್’ ಆಟಗಾರ್ತಿಯಾಗಿದ್ದರೂ, ದೇಶೀಯ ಪಂದ್ಯಗಳಲ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ಅನುಭವವನ್ನು ಗಮನಿಸಿ ಬೆಂಗಳೂರು ತಂಡ ಈ ಅವಕಾಶ ನೀಡಿದೆ.
ತವರಿನ ತಂಡಕ್ಕೇ ನಮ್ಮೂರಿನ ಹುಡುಗಿ ಆಯ್ಕೆಯಾಗಿರುವುದು ಸ್ಥಳೀಯರಿಗೆ ಹೆಮ್ಮೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಅವರು ರಾಷ್ಟ್ರೀಯ ತಂಡದಲ್ಲೂ ಮಿಂಚಲಿ ಎಂದು ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಶುಭ ಹಾರೈಸಿದ್ದಾರೆ.





