ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿರುವ ಕದ್ರಾ ಗ್ರಾಮದ ಯುವತಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ತಿರುವು ಸಿಕ್ಕಿದೆ.
ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಅವರ ಪುತ್ರ ಚಿರಾಗ್ ಕಿರುಕುಳದಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂಬ ಆರೋಪದ ಬೆನ್ನಲ್ಲೇ, ಪ್ರಕರಣದ ನಿಗೂಢತೆಯನ್ನು ಭೇದಿಸಲು ಈಗ ಮೃತ ದೇಹವನ್ನು ಮರಳಿ ಹೊರತೆಗೆದು ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಕಾರವಾರ ಸಹಾಯಕ ಆಯುಕ್ತರು (AC) ಹಸಿರು ನಿಶಾನೆ ತೋರಿಸಿದ್ದಾರೆ.
ಜನವರಿ 9ರಂದು ನಡೆದಿದ್ದ ಈ ದುರಂತ ಸಾವು ಜಿಲ್ಲೆಯಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೆಲವು ಲೋಪದೋಷಗಳು ಹಾಗೂ ಗೊಂದಲಗಳಿವೆ ಎಂದು ಮೃತಳ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಮೃತಳ ತಾಯಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತನ್ನ ಮಗಳ ಸಾವಿನ ಹಿಂದೆ ಅತ್ಯಾಚಾರದ ಶಂಕೆ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ತಾಯಿಯ ಈ ಮನವಿಯನ್ನು ಪುರಸ್ಕರಿಸಿದ ಎಸಿ ಶ್ರವಣ ಕುಮಾರ್ ಅವರು, ಸತ್ಯಾಸತ್ಯತೆ ತಿಳಿಯಲು ಮರು ಪರೀಕ್ಷೆಗೆ ಅಧಿಕೃತ ಆದೇಶ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೆಡಿಸಿಸಿ ಬ್ಯಾಂಕ್ ಚುನಾವಣೆ: ಸಿದ್ದಾಪುರದಲ್ಲಿ ರಾಘವೇಂದ್ರ ಶಾಸ್ತ್ರಿಗೆ ಜಯ; ಹೆಬ್ಬಾರ್ ಬಣ ಮೇಲುಗೈ
ಈ ಬೆಳವಣಿಗೆಯಿಂದಾಗಿ ಮಂಗಳವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮೃತ ದೇಹವನ್ನು ಸಮಾಧಿಯಿಂದ ಹೊರತೆಗೆದು ವಿಶೇಷ ತಜ್ಞರ ತಂಡದಿಂದ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಯಾವುದೇ ಲೋಪಕ್ಕೆ ಅವಕಾಶ ನೀಡಬಾರದೆಂಬ ಕಾರಣಕ್ಕೆ ಧಾರವಾಡ ಮತ್ತು ಮಂಗಳೂರಿನ ಹಿರಿಯ ವೈದ್ಯರನ್ನೊಳಗೊಂಡ ವಿಶೇಷ ವೈದ್ಯಕೀಯ ತಂಡವನ್ನು ಕರೆಸಲಾಗುತ್ತಿದೆ.
ಆರೋಪಿ ಚಿರಾಗ್ ನೀಡಿದ ಮಾನಸಿಕ ಹಾಗೂ ದೈಹಿಕ ಕಿರುಕುಳವೇ ರಿಶೇಲ್ ಸಾವಿಗೆ ಕಾರಣ ಎಂಬುದು ತಾಯಿಯ ವಾದ. ಈಗ ನಡೆಯಲಿರುವ ಎರಡನೇ ಮರಣೋತ್ತರ ಪರೀಕ್ಷೆಯ ವರದಿಯು ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ತನಿಖೆಗೆ ಹೊಸ ದಿಕ್ಕು ನೀಡುವ ಸಾಧ್ಯತೆಯಿದೆ.
ರಾಜ್ಯ ಮಟ್ಟದ ವೈದ್ಯರ ತಂಡ ನೀಡುವ ವರದಿಯ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದ್ದು, ಯುವತಿಯ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.





