ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಾಣಿಕೆ ತಡೆಗಟ್ಟಲು ತೆರಳಿದ್ದ ಭೂ ವಿಜ್ಞಾನ ಇಲಾಖೆ ತಂಡದ ಸರ್ಕಾರಿ ಕಾರ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಹೊನ್ನಾವರ ಠಾಣೆಯಲ್ಲಿ FIR ದಾಖಲಾಗಿದೆ. ಹಿರಿಯ ಭೂ ವಿಜ್ಞಾನಿ ಶ್ರೀಮತಿ ಆಶಾ ಎಂ.ಎಸ್ ಅವರು ನವೆಂಬರ್ 12ರ ರಾತ್ರಿ ಕಾರವಾರದಿಂದ ಕುಮಟಾ–ಹೊನ್ನಾವರ ಮಾರ್ಗದಲ್ಲಿ ಗಸ್ತು ನಡೆಸುವಾಗ. ಅವರು ತಮ್ಮ ಸಹೋದ್ಯೋಗಿಗಳಾದ ಹರೀಶ ಕೆ.ಎಸ್, ಮಂಜುನಾಥ ಶನಿಯಾರ ದೇವಾಡಿಗ, ಸಿಬ್ಬಂದಿ ಸಂತೋಷ ನಾಯ್ಕ ಹಾಗೂ ಚಾಲಕ ಸಂಜಯ ನಾಯ್ಕ ರೊಂದಿಗೆ ಅಧಿಕೃತ ವಾಹನ (ಕೆಎ-04/ಜಿ-1608)ದಲ್ಲಿ ಕಾರ್ಯಾಚರಣೆಗೆ ಹೊರಟಿದ್ದರು.
ಆ ಸಂದರ್ಭದಲ್ಲಿ ಅನಧಿಕೃತ ಮರಳು ಸಾಗಾಣಿಕೆಯ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಂಡವು ಚಂದಾವರದ ಕಡೆಗೆ ತೆರಳುತ್ತಿದ್ದ ವೇಳೆ, 2 ಗಂಟೆಯ ಸುಮಾರಿಗೆ ಕೆಎ–47/7700, ಕೆಎ–47/ಎ–4785, ಕೆಎ–47/ಎ–5750 ಮತ್ತು ಕೆಎ–31/ಎ–4923 ಸಂಖ್ಯೆಯ ಮರಳು ಸಾಗಾಣಿಕೆ ವಾಹನಗಳು ಕಂಡುಬಂದಿದ್ದವು. ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಬೇರೆ ವಾಹನಗಳಲ್ಲಿ ಬಂದ ಅಪರಿಚಿತರು ಆ ವಾಹನಗಳನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದು ಅಲ್ಲದೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಎ–47/ಎಂ–6763 (ಕ್ವಿಡ್), ಕೆಎ–05/ಎಂಎಲ್–7354 (ಎರ್ಟಿಗಾ) ಹಾಗೂ ಕೆಎ–19/ಎಂಎ–8825 (ಕಾರ್) ವಾಹನಗಳಲ್ಲಿ ಬಂದ ನಾಲ್ವರು ಸರ್ಕಾರಿ ವಾಹನಕ್ಕೆ ಅಡ್ಡಿಯಾಗಿ, ಚಂದಾವರದಿಂದ ಅಂಕೋಲಾದವರೆಗೆ ಬೆಳಗ್ಗೆ 8 ಗಂಟೆಯವರೆಗೂ ಅಧಿಕಾರಿಗಳನ್ನು ಹಿಂಬಾಲಿಸಿ, ಮಾಹಿತಿ ಹಂಚುವ ಮೂಲಕ ಮರಳು ಸಾಗಾಣಿಕೆ ವಾಹನಗಳನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಿಲ್ಲೆಯಲ್ಲಿ ಆರು ಸಂಚಾರಿ ಆರೋಗ್ಯ ಘಟಕಗಳ ಸೇವೆ ಶೀಘ್ರದಲ್ಲೇ ಪ್ರಾರಂಭ
ಅನಧಿಕೃತ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನಗಳು ವಿನಾಯಕ ಮಾಣಿ ಹಾಗೂ ಇನ್ನಿತರರಿಗೆ ಸೇರಿರುವ ಸಾಧ್ಯತೆಯಿದೆ ಎಂಬ ಅನುಮಾನವನ್ನೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಶ್ರೀಮತಿ ಆಶಾ ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಒಬ್ಬ ಮಹಿಳಾ ಸರ್ಕಾರಿ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು, ಮರಳು ಮಾಫಿಯಾ ಜಿಲ್ಲೆಯಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸೂಚನೆಯಾಗಿದೆ. ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ನಿಯಂತ್ರಣಕ್ಕೆ ತರದಿದ್ದರೆ, ಮುಂದಿನ ದಿನಗಳಲ್ಲಿ ಇವರು ಮತ್ತಷ್ಟು ಅಪಾಯಕಾರಿಗಳಾಗುವ ಸಾಧ್ಯತೆ ಇದೆ. ಘಟನೆಯ ಚಿತ್ರಗಳು ಹಾಗೂ ವೀಡಿಯೊಗಳಿರುವ ಸಿಡಿ–1 ಅನ್ನು ಅಧಿಕಾರಿಗಳು ಪೊಲೀಸರಿಗೆ ಹಸ್ತಾಂತರಿಸಿದ್ದು, ಪೊಲೀಸರು ದೂರು ದಾಖಲಿಸಿ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.





