ಉತ್ತರ ಕನ್ನಡ ಜಿಲ್ಲೆಯ ನದಿ ತೀರಗಳಲ್ಲಿ ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿರುವ ಮರಳು ಗಣಿಗಾರಿಕೆ ನಿಷೇಧ ಕ್ರಮ ಶ್ಲಾಘನೀಯ. ಆದರೆ, ಅದರ ಅನುಷ್ಠಾನದಲ್ಲಿ ಸರ್ಕಾರ ಮತ್ತು ಇಲಾಖೆಗಳ ವತಿಯಿಂದ ಉಂಟಾದ ವೈಫಲ್ಯ ಇಂದು ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಹಸಿರು ಪೀಠದ ಆದೇಶಕ್ಕೆ ಕ್ಯಾರೇ ಎನ್ನದೆ ಕೆಲವು ದಂಧೆಕೋರರು ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ. ನಿಷೇಧ ಇರುವುದರಿಂದ ಮರಳುಗಾರಿಕೆಗೆ ಅಧಿಕೃತ ಪರವಾನಗಿ ನೀಡಲಾಗದಿದ್ದರೂ, ನದಿಗಳಲ್ಲಿನ ಮರಳು ನಿರಂತರವಾಗಿ ತೆಗೆಯಲ್ಪಡುತ್ತಿದೆ. ಇದರ ಪರಿಣಾಮವಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ಮರಳು ಗಣಿಗಾರಿಕೆ ಸ್ಥಗಿತಗೊಂಡು ಮೂರು ವರ್ಷಗಳ ಮೇಲೆ ಆಗಿದೆ. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸರ್ಕಾರಿ ಕಾಮಗಾರಿಗಳೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಮರಳಿನ ಕೊರತೆ ಎದುರಾಗುತ್ತಿಲ್ಲ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಎಂದು ಉದ್ದಿಮೆದಾರರು ಹೇಳುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಪರಿಸರ ಸಂರಕ್ಷಣೆ ಉದ್ದೇಶದಿಂದ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಗೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ನಿಷೇಧ ಹೇರಿತ್ತು. ಆದರೆ, ಈ ನಿಷೇಧ ಪ್ರಕಾರ ಕೇವಲ ಕರಾವಳಿ ವಲಯದ ಪ್ರದೇಶಗಳಲ್ಲಿ ಗಣಿಗಾರಿಕೆ ನಿಲ್ಲಬೇಕಾಗಿತ್ತು. ಸ್ಥಳೀಯವಾಗಿ ಲಭ್ಯ ಮರಳಿನ ಪ್ರಮಾಣ ಮತ್ತು ಬೇಡಿಕೆಯ ಬಿಕ್ಕಟ್ಟು ನಿರ್ವಹಿಸಲು ಸರಿಯಾದ ಪರ್ಯಾಯ ಮಾರ್ಗ ಕಂಡುಕೊಳ್ಳದೆ ನಿಷೇಧವನ್ನು ಸಂಪೂರ್ಣ ಜಿಲ್ಲೆಗೆ ವಿಸ್ತರಿಸಿದ ಪರಿಣಾಮ, ಅಕ್ರಮ ಮರಳು ದಂಧೆಗೆ ಅವಕಾಶ ಸಿಕ್ಕಂತಾಗಿದೆ.

ಪ್ರತಿವರ್ಷ ಸುಮಾರು 12 ಮೆಟ್ರಿಕ್ ಟನ್‌ನಷ್ಟು ಮರಳು ಸಂಗ್ರಹವಾಗುವ ಜಿಲ್ಲೆಯ ನದಿ ಪ್ರದೇಶಗಳಲ್ಲಿ ಅಧಿಕೃತ ಗಣಿಗಾರಿಕೆಯಿಂದಲೇ ರಾಜ್ಯ ಸರ್ಕಾರಕ್ಕೆ 8–9 ಕೋಟಿ ರೂ. ಆದಾಯ ಬರುವ ಸಾಧ್ಯತೆ ಇತ್ತು. ಆದರೆ, ನಿಷೇಧದಿಂದಾಗಿ ಈ ಹಣದ ಬಹುಭಾಗ ಅಕ್ರಮ ಮರಳು ದಂಧೆಕೋರರ ಕೈಗೆ ಹೋಗುತ್ತಿದೆ. ವರದಿಗಳ ಪ್ರಕಾರ, ಹೊನ್ನಾವರ, ಕಾರವಾರ, ಅಂಕೋಲಾ, ಕುಮಟಾ ಮತ್ತು ಭಟ್ಕಳ ತಾಲ್ಲೂಕುಗಳಲ್ಲಿ ರಾತ್ರಿ ವೇಳೆ ವ್ಯಾಪಕ ಗಣಿಗಾರಿಕೆ ನಡೆಯುತ್ತಿದ್ದು, ಹೊನ್ನಾವರದ ಶರಾವತಿ ನದಿ ತೀರದ ಮೂಡ್ಕಣಿ, ಮಾಗೋಡು, ಅಡ್ಕಾರ ಹಾಗೂ ಕುದ್ರಿಗಿ ಗ್ರಾಮಗಳಲ್ಲಿ ಪರಿಸರ ಹಾನಿಯ ಪ್ರಮಾಣ ಕೂಡ ಗಂಭೀರವಾಗಿದೆ. ಕಾರವಾರ ನಗರದ ಸುಂಕೇರಿ, ಕಡವಾಡ, ಸಿದ್ದರ, ಕಿನ್ನರ, ಉಳಗಾ ಸೇರಿದಂತೆ ವಿವಿಧೆಡೆ ರಾತ್ರಿ ವೇಳೆ ನದಿಯಿಂದ ಮರಳು ತೆಗೆಯುವ ಕೆಲಸ ನಡೆದಿದೆ. ಅಕ್ರಮ ಚಟುವಟಿಕೆಗೆ ಅಡ್ಡಿಪಡಿಸಬಹುದು ಎಂಬ ಕಾರಣಕ್ಕೆ ನದಿ ಸುತ್ತಮುತ್ತ ಜನರು ಓಡಾಡದಂತೆ ದಂಧೆಕೋರರು ನಿಗಾ ಇಡುತ್ತಿದ್ದಾರೆ. ಇಂತದ್ದೇ ಸ್ಥಿತಿ ಅಂಕೋಲಾ, ಕುಮಟಾದಲ್ಲಿಯೂ ಇದೆ ಎಂದು ನಿವೃತ್ತ ಅಧಿಕಾರಿಯೊಬ್ಬರು ದೂರಿದರು. ಜಿಲ್ಲೆಯ ಕರಾವಳಿ ಭಾಗದ ನದಿಗಳಿಂದ ತೆಗೆಯಲಾಗುವ ಮರಳನ್ನು ಪಕ್ಕದ ರಾಜ್ಯ ಗೋವಾ, ಹಾಗೂ ಹತ್ತಿರದ ಜಿಲ್ಲೆಗಳಾದ ಹುಬ್ಬಳ್ಳಿ, ಹಾವೇರಿ ಸೇರಿದಂತೆ ವಿವಿಧ ಪ್ರದೇಶಕ್ಕೆ ರಾಜಾರೋಷವಾಗಿ ರವಾನಿಸಲಾಗುತ್ತಿದೆ. ಈ ಮಾರ್ಗಗಳಲ್ಲಿ ಪೊಲೀಸ್, ಅರಣ್ಯ ಇಲಾಖೆ ಚೆಕ್‍ಪೋಸ್ಟ್‌ಗಳಿದ್ದರೂ ಯಾವುದೇ ತಪಾಸಣೆಯಾಗಲಿ, ಸಾಗಾಟ ತಡೆಯುವ ಕೆಲಸವಾಗಲೀ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಅಕ್ರಮ ಮರಳು ದಂಧೆ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಕಾರ್ಯಾಚರಣೆ ನಡೆಸಿದಾಗೆಲ್ಲಾ ಬರುವ ಮಾತು ಬಡವರು ಮನೆ ಕಟ್ಟಿಕೊಳ್ಳಲು ಮರಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಿಷೇಧ ಹೇರಿದರೆ ಅವರು ಮನೆ ಹೇಗೆ ಕಟ್ಟಿಕೊಳ್ಳಬೇಕು? ಜಾಸ್ತಿ ಹಣ ನೀಡಿ ಮರಳನ್ನು ಖರೀದಿಸುವ ಶಕ್ತಿ ಅವರಲ್ಲಿ ಇರುವುದಿಲ್ಲ ಎಂಬ ಮಾತು ಕೇಳಿಬರುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಸಮಯಕ್ಕೆ ಮರಳು ಸಿಗದೇ ಇದ್ದರೆ ಅಭಿವೃದ್ಧಿ ಕೆಲಸ ನಡೆಯುವುದಾದರೂ ಹೇಗೆ ಎನ್ನುವ ಪ್ರಶ್ನೆ ಮುಂದೆ ತಂದು ರಾಜಕೀಯ ಲಾಬಿ ಮಾಡುತ್ತಾರೆ. ಇದರಿಂದ ಅಧಿಕಾರಿಗಳು ಸಹ ರಾಜಕೀಯ ಒತ್ತಡಕ್ಕೆ ಮಣಿಯುವಂತೆ ಆಗಿದೆ.

ಆದರೆ, ಬಡವರ ಹೆಸರಿನಲ್ಲಿ ಮರಳು ತೆಗೆದು ಮಾರಾಟ ಮಾಡುವವರೇ ಬೇರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಕೆಲವರಂತೂ ಹೊರ ರಾಜ್ಯದ ಕಾರ್ಮಿಕರನ್ನು ನೇಮಿಸಿಕೊಂಡು ಅನುಮತಿಯಿಲ್ಲದೆ ನದಿ ಮರಳು ತೆಗೆದು ದುಬಾರಿ ದರಕ್ಕೆ ರಾಜಾರೋಷವಾಗಿ ಮಾರುವಷ್ಟು ದಿನದಿಂದ ದಿನಕ್ಕೆ ಪ್ರಭಾವಿಗಳಾಗುತ್ತಿದ್ದಾರೆ. ದಂಧೆಕೋರರ ವಿರುದ್ಧ ಗಣಿ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ದಾಖಲಾದ ಪ್ರಕರಣಗಳ ಅಂಕಿ ಅಂಶಗಳೆ ಹೇಳುತ್ತಿವೆ. ಆದರೆ ಜಿಲ್ಲೆಯಲ್ಲಿ ನಡೆದಿರುವ ಕಾರ್ಯಾಚರಣೆಯ ಸಂದರ್ಭದಲ್ಲಿ ದಂಧೆಕೋರರು ಎಷ್ಟರ ಮಟ್ಟಿಗೆ ಪ್ರಭಾವಿಗಳಾಗಿದ್ದಾರೆ ಎಂದರೆ ಇಲಾಖೆ ದಾಳಿಯನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಪ್ರಭಾವಿಗಳಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಒಬ್ಬರು ವಿವರಿಸಿದರು. ಗಣಿ ಇಲಾಖೆ ಅಧಿಕಾರಿಗಳ ವಾಹನಕ್ಕೆ ಜಿಪಿಎಸ್ ಅಳವಡಿಸಬೇಕು ಎಂದು ಮರಳು ನಿಯಂತ್ರಣ ಸಭೆಯಲ್ಲಿ ನಡಾವಳಿಗಳನ್ನು ಕೂಡ ಮಾಡಲಾಗಿದೆ. ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಹೆಚ್ಚಿನ ಮರಳುಗಾರಿಕೆ ಇದೆ. ಆದರೆ, ಭಟ್ಕಳ ಬಿಟ್ಟು ಉಳಿದ ತಾಲೂಕುಗಳಲ್ಲಿ ಹೆಚ್ಚಿನ ಕೇಸುಗಳು ದಾಖಲಾಗಿವೆ.
ಜಿಲ್ಲಾ ಗಣಿಗಾರಿಕೆ ಮತ್ತು ಭೂವಿಜ್ಞಾನ ಉಪನಿರ್ದೇಶಕಿ ಆಶಾ ಜಿ ಎಸ್ ಅವರು ಕೊಟ್ಟ ಮಾಹಿತಿ ಪ್ರಕಾರ, “ಕಳೆದ ಮೂರು ವರ್ಷಗಳಲ್ಲಿ (ಈ ವರ್ಷದ ಏಪ್ರಿಲ್ ಮೇ ತಿಂಗಳ ತನಕ) 628 ಪ್ರಕರಣ ದಾಖಲಿಸಿ ಒಟ್ಟು 2.34 ಕೋಟಿ ರೂ. ದಂಡವನ್ನು ವಿವಿಧ ಇಲಾಖೆಗಳು ಸಂಗ್ರಹಿಸಿವೆ. ಅದರಲ್ಲಿ ಗಣಿ ಇಲಾಖೆ 1.37 ಕೋಟಿ ರೂ, ಪೊಲೀಸ್ ಇಲಾಖೆ 72 ಲಕ್ಷ ರೂ ಹಾಗೂ ಕಂದಾಯ ಇಲಾಖೆ 25 ಲಕ್ಷ ರೂನಷ್ಟು ದಂಡ ವಿಧಿಸಿದೆ”. ಇಷ್ಟೆಲ್ಲಾ ಕಾನೂನು ಕ್ರಮ ಕೈಗೊಂಡರೂ ಇದಾವುದಕ್ಕೂ ಹೆದರದ ದಂಧೆಕೋರರು ನಿರಂತರವಾಗಿಯೇ ದಂಧೆಯನ್ನು ಮುಂದುವರಿಸಿದ್ದಾರೆ. ಇವರ ಹಿಂದೆ ಅದ್ಯಾವ ಶಕ್ತಿಯ ಅಭಯ ಹಸ್ತ ಇದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು, “ಜಿಲ್ಲೆಯಲ್ಲಿ ಮರಳು ತೆಗೆಯಲು ನಿಷೇಧ ಇದೆ. ಮರಳು ಗಣಿಗಾರಿಕೆ ಕುರಿತ ಪ್ರಕರಣ ಹಸಿರು ನ್ಯಾಯಪೀಠದಲ್ಲಿದೆ. ಅದು ಇನ್ನೂ ತೀರ್ಮಾನ ಆಗಿಲ್ಲ, ಹಾಗಾಗಿ ಮರಳು ಗಣಿಗಾರಿಕೆಗೆ ಜಿಲ್ಲೆಯಲ್ಲಿ ಸದ್ಯ ಅವಕಾಶ ಸಿಕ್ಕಿಲ್ಲ” ಎಂದರು.

“ಸಿಆರ್‌ಝಡ್ ವಲಯದಲ್ಲಿ ಮರಳು ಗಣಿಗಾರಿಕೆ ನಡೆಸದಂತೆ ಎನ್‌ಜಿಟಿ ಆದೇಶಿಸಿದೆ. ಈ ಕಾರಣದಿಂದಲೇ ಅಧಿಕೃತವಾಗಿ ಮರಳು ದಿಬ್ಬಗಳನ್ನು ಗುರುತಿಸಿ, ಅಲ್ಲಿ ಮಾತ್ರ ತೆರವುಗೊಳಿಸಲು ಪರವಾನಗಿದಾರರಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡುತ್ತಿದ್ದ ಚಟುವಟಿಕೆಯು ನಿಂತಿದೆ. ಆದರೆ, ಅಕ್ರಮವಾಗಿ ಮರಳು ತೆಗೆಯುವುದು ಗಮನದಲ್ಲಿದ್ದರೂ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳು ನಿಯಂತ್ರಣ ಹೇರುತ್ತಿಲ್ಲ. ಇದು ಎನ್‌ಜಿಟಿ ಆದೇಶದ ಉಲ್ಲಂಘನೆ” ಎಂದು ಪರಿಸರ ಕಾರ್ಯಕರ್ತ ಹಾಗೂ ದಸಂಸ (ಕಾದ್ರೊಳ್ಳಿ ಬಣ)ದ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ ಹೇಳಿದರು.
2022ರ ಮೇ 19 ರಂದು ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಡೆಸಲು ನಿಷೇಧ ಹೇರಲಾಗಿತ್ತು. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಹೊನ್ನಾವರದ ವ್ಯಕ್ತಿಯೊಬ್ಬರು ಎನ್.ಜಿ.ಟಿ ಗೆ ದೂರು ಸಲ್ಲಿಸಿದ್ದರಿಂದ ಗಣಿಗಾರಿಕೆ ಸ್ಥಗಿತಗೊಂಡಿತ್ತು. ನೆರೆಯ ಜಿಲ್ಲೆಗಳಲ್ಲಿ ಸಿಆರ್‌ಝಡ್ ರಹಿತ ವಲಯದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಸಿಕ್ಕಿದೆ. ಆದರೆ ಉತ್ತರ ಕನ್ನಡದಲ್ಲಿ ಸಿ ಆರ್ ಝಡ್ ವಲಯದಲ್ಲಿ ಮರಳು ದಿಬ್ಬಗಳು ಹೆಚ್ಚಿದ್ದರೂ ಇಲ್ಲಿ ಅನುಮತಿ ಸಿಕ್ಕಿಲ್ಲ. ಸಿ ಆರ್ ಝಡ್ ರಹಿತ ವಲಯದಲ್ಲಿ 11 ದಿಬ್ಬಗಳನ್ನು ಗುರುತಿಸಲಾಗಿತ್ತಾದರೂ ಅಲ್ಲಿ ಸಾಕಷ್ಟು ಮರಳಿನ ಲಭ್ಯತೆ ಇರಲಿಲ್ಲ ಜೊತೆಗೆ ಅದು ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿ ಇರುವುದರಿಂದ ತಾಂತ್ರಿಕ ಸಮಸ್ಯೆಗಳು ಎದುರಾದವು ಎಂದು ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳು: ಮಿತಿಮೀರಿದ ಮತ್ತು ಅಕ್ರಮ ಮರಳು ತೆಗೆಯುವಿಕೆಯಿಂದ ನದಿಯ ಹಾಸುಬೆಟ್ಟುಗಳು (riverbeds) ನಾಶವಾಗುತ್ತಿವೆ. ಇದು ನದಿಗಳ ಹರಿವಿನ ದಿಕ್ಕನ್ನು ಬದಲಿಸಿ ತೀರಪ್ರದೇಶದ ಸವೆತಕ್ಕೆ ಕಾರಣವಾಗುತ್ತದೆ.
ಜಲಚರಗಳ ಮೇಲೆ ಪರಿಣಾಮ: ನದಿಗಳ ಹಾದಿ ಬದಲಾಗುವುದರಿಂದ ಮತ್ತು ಹೂಳೆತ್ತುವುದರಿಂದ ಮೀನುಗಳು ಹಾಗೂ ಇತರೆ ಜಲಚರಗಳ ಆವಾಸಸ್ಥಾನ ಹಾಳಾಗುತ್ತದೆ. ಇದು ಸ್ಥಳೀಯ ಮೀನು ಸಂಪತ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಭೂಗತ ಅಂತರ್ಜಲದ ಕುಸಿತ: ನದಿಪಾತ್ರದಿಂದ ಮರಳನ್ನು ತೆಗೆದಾಗ ದೊಡ್ಡ ಹೊಂಡಗಳು ಉಂಟಾಗುತ್ತವೆ, ಇದು ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗುತ್ತದೆ.

ಮೂಲಸೌಕರ್ಯಗಳಿಗೆ ಹಾನಿ: ನದಿಪಾತ್ರಗಳ ಅಸ್ಥಿರತೆಯು ಸೇತುವೆಗಳು, ಅಣೆಕಟ್ಟುಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಅಪಾಯವನ್ನುಂಟುಮಾಡಬಹುದು.
ಇದನ್ನೂ ಓದಿ: ಉತ್ತರ ಕನ್ನಡ | ಜಿಲ್ಲೆಯಲ್ಲಿ ಆರು ಸಂಚಾರಿ ಆರೋಗ್ಯ ಘಟಕಗಳ ಸೇವೆ ಶೀಘ್ರದಲ್ಲೇ ಪ್ರಾರಂಭ
ನಿಯಂತ್ರಣ ಕ್ರಮಗಳು: ಕರ್ನಾಟಕ ಸರ್ಕಾರವು ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮರಳು ನೀತಿ, 2020: ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ ಅಕ್ರಮವಾಗಿ ಮರಳು ಗಣಿಗಾರಿಕೆ ಮತ್ತು ಸಾಗಾಟದಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
“ಮರಳು ಮಿತ್ರ” ಆ್ಯಪ್: ಈ ಆ್ಯಪ್ ಮೂಲಕ ಸಾರ್ವಜನಿಕರು ಮರಳು ಖರೀದಿಗೆ ನೋಂದಾಯಿಸಿಕೊಳ್ಳಬಹುದು. ಇದು ಮಾರಾಟದ ಪ್ರಮಾಣ, ಗಣಿಗಾರಿಕೆಯ ಪ್ರಮಾಣ ಮತ್ತು ಸಾಗಣೆ ಮಾಡಿದ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.
ಖನಿಜ ಸಂರಕ್ಷಣಾ ಪಡೆ: ಅಕ್ರಮ ಖನಿಜ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಖನಿಜ ಸಂರಕ್ಷಣಾ ಪಡೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
GPS ವ್ಯವಸ್ಥೆ: ಮರಳು ಸಾಗಿಸುವ ವಾಹನಗಳನ್ನು ಟ್ರ್ಯಾಕ್ ಮಾಡಲು ಕೇಂದ್ರಿಕೃತ GPS ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಜಿಲ್ಲಾ ಮರಳು ಸಮಿತಿ: ಅಕ್ರಮ ಗಣಿಗಾರಿಕೆ ಮತ್ತು ಸಾಗಾಟವನ್ನು ತಡೆಯಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ಸಮಿತಿಯನ್ನು ರಚಿಸಲಾಗಿದೆ.
ಮರಳು ಗಣಿಗಾರಿಕೆ ನಿಷೇಧದ ಉದ್ದೇಶ ಸರಿಯಾದದ್ದಾದರೂ, ಅದರ ಅನುಷ್ಠಾನದ ವೈಫಲ್ಯ ಪರಿಸರಕ್ಕೂ, ರಾಜ್ಯದ ಆದಾಯಕ್ಕೂ, ಹಾಗೂ ಸ್ಥಳೀಯ ಸಮಾಜದ ಭವಿಷ್ಯಕ್ಕೂ ತೀವ್ರ ಹಾನಿ ಮಾಡುತ್ತಿದೆ. ಹಸಿರು ಪೀಠದ ಆದೇಶವನ್ನು ಗೌರವಿಸುವ ಹೆಸರಿನಲ್ಲಿ ಸಂಪೂರ್ಣ ಜಿಲ್ಲೆಯಲ್ಲಿ ಗಣಿಗಾರಿಕೆ ನಿಲ್ಲಿಸಿದರೂ, ನೈಜ ನಿಯಂತ್ರಣದ ಕೊರತೆಯಿಂದ ಅಕ್ರಮ ದಂಧೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಹಿಂದೆ ಇರುವ ರಾಜಕೀಯ–ಆರ್ಥಿಕ ಶಕ್ತಿಗಳನ್ನು ಗುರುತಿಸುವಂತಹ ಗಂಭೀರ ತನಿಖೆಯ ಅಗತ್ಯವಿದೆ. ಸರ್ಕಾರದ ಯಾವ ಕ್ರಮಗಳು ನೆಲಮಟ್ಟದಿಂದ ಬಲವಾಗಿ ಜಾರಿಗೆ ಬರದಿದ್ದರೆ, ಅಕ್ರಮ ದಂಧೆಗೆ ಇರುವ ರಕ್ಷಾಕವಚ ಎಂದಿನಂತೆಯೇ ಮುಂದುವರೆಯುತ್ತದೆ. ಪರಿಸರದ ರಕ್ಷಣೆಯೂ, ಸರ್ಕಾರದ ಆದಾಯವೂ, ಜನರ ಹಿತವೂ ಒಂದೇ ದಿಕ್ಕಿನಲ್ಲಿ ಸಾಗಬೇಕು. ಇಲ್ಲದಿದ್ದರೆ, ನದಿ ತೀರಗಳ ಗಾಳಿಯ ಧ್ವನಿಗಿಂತಲೂ ಅಕ್ರಮವಾಗಿ ಸಾಗಾಟ ಮಾಡುವ ಮರಳು ವ್ಯಾಪಾರದ ಶಬ್ದವೇ ಹೆಚ್ಚು ಕೇಳುತ್ತದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಕೂಡಲೇ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಜಿಲ್ಲೆಯ ಸಾರ್ವಜನಿಕರ ಆಶಯ.





