ಉತ್ತರ ಕನ್ನಡ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಕಷ್ಟ ಎದುರಿಸುತ್ತಿರುವ ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ವೈದ್ಯಕೀಯ ಜಾಮೀನು ನೀಡಿದೆ.
ಅವರ ಗಂಭೀರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿರುವ ನ್ಯಾಯಾಲಯ, ಲಿವರ್ (ಯಕೃತ್ತು) ಕಸಿ ಶಸ್ತ್ರಚಿಕಿತ್ಸೆಗಾಗಿ ಈ ಅನುಮತಿ ನೀಡಿದೆ. ಚಿಕಿತ್ಸೆಗೆ ಅವಕಾಶ ನೀಡಿದ್ದರೂ, ನ್ಯಾಯಾಲಯವು ಸೈಲ್ ಅವರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ,
ಚಿಕಿತ್ಸೆಯ ಪ್ರಗತಿಗೆ ಸಂಬಂಧಿಸಿದಂತೆ ಪ್ರತಿ ಎರಡು ವಾರಗಳಿಗೊಮ್ಮೆ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರತಿ ಎಂಟು ವಾರಗಳಿಗೊಮ್ಮೆ ಆರೋಗ್ಯ ಸುಧಾರಣೆಯ ಸಮಗ್ರ ವರದಿಯನ್ನು ನೀಡಬೇಕು,
5 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಭದ್ರತೆಯನ್ನು ಒದಗಿಸಬೇಕು. ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಅಥವಾ ಪ್ರಕರಣದ ತನಿಖಾ ಪ್ರಕ್ರಿಯೆಗೆ ಅಡ್ಡಿಪಡಿಸಬಾರದು ಎಂದು ನ್ಯಾಯಪೀಠ ಷರತ್ತುಗಳ ಮೂಲಕ ಜಾಮೀನು ನೀಡಿದೆ.
ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಸೆಪ್ಟೆಂಬರ್ 9 ರಂದು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ವಿಚಾರಣೆಗೆ ಹಾಜರಾಗಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಇದಕ್ಕೂ ಮುನ್ನ, ಆಗಸ್ಟ್ 2025ರಲ್ಲಿ ಇಡಿ ಅಧಿಕಾರಿಗಳು ಸೈಲ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಕಾರವಾರ ಮಾತ್ರವಲ್ಲದೆ ಗೋವಾ, ಮುಂಬೈ ಮತ್ತು ದೆಹಲಿಯಲ್ಲೂ ಇಡಿ ಶೋಧ ನಡೆಸಿತ್ತು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | 108 ಅಂಬ್ಯುಲೆನ್ಸ್‌ನಲ್ಲಿ ಸುರಕ್ಷಿತ ಹೆರಿಗೆ: ಗಂಡು ಮಗುವಿಗೆ ಜನ್ಮ ನೀಡಿದ ತಾಯಿ
ಸತೀಶ್ ಸೈಲ್ ಅವರ ಮೇಲೆ ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಹಳೆಯ ಪ್ರಕರಣವೂ ಇದೆ. ಈ ಸಂಬಂಧ 2024ರ ಅಕ್ಟೋಬರ್‌ನಲ್ಲಿ ವಿಶೇಷ ನ್ಯಾಯಾಲಯವು ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ಅವರ ಕಂಪನಿಗಳಿಗೆ 44 ಕೋಟಿ ರೂಪಾಯಿ ದಂಡ ವಿಧಿಸಿತ್ತು.
ಆದರೆ, ನಂತರ ಹೈಕೋರ್ಟ್ ಈ ಶಿಕ್ಷೆಯನ್ನು ಅಮಾನತುಗೊಳಿಸಿದ್ದು, ಮೇಲ್ಮನವಿ ವಿಚಾರಣೆ ಬಾಕಿ ಇರುವ ಕಾರಣ ಕಾರವಾರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸದಂತೆ ಸೂಚನೆ ನೀಡಿತ್ತು.
ಪ್ರಸ್ತುತ, ಶಾಸಕರ ಆರೋಗ್ಯದ ದೃಷ್ಟಿಯಿಂದ ಹೈಕೋರ್ಟ್ ನೀಡಿರುವ ಈ ಜಾಮೀನು ಅವರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ.





