ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ದೇಶಿತ ಶರವಾತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಅಧಿವೇಶನದಲ್ಲಿ ಯೋಜನೆ ಬಗ್ಗೆ ಪ್ರಶ್ನೆಗೆ ವಿವರಣೆ ನೀಡಿದರು. ಈ ಯೋಜನೆಯ ಮೂಲಕ 2000 ಮೆಗಾ ವ್ಯಾಟ್ (ಮೆ.ವ್ಯಾ.) ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು. ಪರಿಸರಕ್ಕೆ ಹಾನಿಯಾಗಲಿದೆ ಎಂದು ಆರೋಪಿಸುವವರಿಗೆ ಸರಿಯಾದ ಮಾಹಿತಿಯ ಕೊರತೆ ಇದೆ ಜನಪ್ರತಿನಿಧಿಗಳು ಮತ್ತು ಪರಿಸರವಾದಿಗಳಿಂದ ಬಂದ ತಕರಾರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಸಂಬಂಧಿಸಿದ ತಜ್ಞರು ಮತ್ತು ಅಧಿಕಾರಿಗಳಿಂದ ಪರಿಶೀಲನಾ ವರದಿಗಳನ್ನು ಪಡೆಯಲಾಗಿದೆ. ಈ ಯೋಜನೆಯ ಕುರಿತು ಶಾಸಕರಿಗೆ ಇನ್ನೂ ಯಾವುದೇ ಸಂದೇಹಗಳಿದ್ದರೆ, ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಯೋಜನೆಯಲ್ಲಿ ಸುರಂಗ ಮಾರ್ಗದ ಬದಲು ಪೈಪ್‌ಲೈನ್ ಅಳವಡಿಸಲಾಗುತ್ತದೆ. ಕಾಮಗಾರಿ ಮುಗಿದ ನಂತರ ಆ ಪ್ರದೇಶವನ್ನು ಪುನಃ ಮೊದಲಿನ ಸ್ಥಿತಿಗೆ ತಂದು ಅರಣ್ಯೀಕರಣ ಮಾಡಲಾಗುವುದು. ಈ ಯೋಜನೆಗೆ ಕೇವಲ 25 ಎಕರೆ ಭೂಮಿ ಮಾತ್ರ ಅಗತ್ಯವಿದೆ. ಹೀಗಾಗಿ, ಪರಿಸರದ ಮೇಲೆ ಯಾವುದೇ ಹಾನಿಯಾಗದಂತೆ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನನಸಾಗದ ʼಸ್ವಂತ ಮನೆʼ ಕನಸು; ಸಂಗ್ರಹಿಸಿದ ಶುಲ್ಕಕ್ಕೆ ಲೆಕ್ಕ ಕೊಡುವುದೇ ಗೃಹ ಮಂಡಳಿ?
ಈಗಿರುವ ಶರಾವತಿ ಜಲಾಶಯದಲ್ಲಿ 1964ರ ಯೋಜನೆಯಿಂದ 1 ಲಕ್ಷ ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿತ್ತು ಮತ್ತು ಈಗ ವರಾಹಿಯೂ ಸೇರಿದಂತೆ 1400 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ.ಪ್ರಸ್ತುತ ಯೋಜನೆಯಲ್ಲಿ, ಉಪಯೋಗಿಸಿದ ನೀರನ್ನೇ ಪುನಃ ಪಂಪ್ ಮಾಡಿ ಬಳಸಿಕೊಳ್ಳುವ ಮೂಲಕ ಮತ್ತೆ ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
“ಸೌರಶಕ್ತಿ, ಪವನಶಕ್ತಿ ಸೇರಿದಂತೆ ನವೀಕರಿಸಿದ ಇಂಧನ ಮೂಲಗಳನ್ನು ಬಳಸುವ ಯೋಜನೆಗಳಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ, ಶೀಘ್ರವೇ ಮೊದಲನೇ ಸ್ಥಾನಕ್ಕೆ ಬರುವ ವಿಶ್ವಾಸವಿದೆ”. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಸಾವಿರ ಮೆ.ವ್ಯಾ. ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ವಿದ್ಯುತ್ ಕಡಿತ ಮಾಡದೆ (ಪವರ್ ಕಟ್) ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ನೀಡಲಾಗುತ್ತಿದೆ ಎಂದು ಸಚಿವರು ಯೋಜನೆ ಬಗ್ಗೆ ಮಾಹಿತಿ ನೀಡಿದರು.





