ಉತ್ತರ ಕನ್ನಡ: ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಸರೆಯಾಗಬೇಕಿದ್ದ ಸರ್ಕಾರಿ ಹಾಸ್ಟೆಲ್‌ಗಳು (ವಸತಿ ನಿಲಯಗಳು) ಇಂದು ಮೂಲಸೌಕರ್ಯ ಮತ್ತು ಸಿಬ್ಬಂದಿ ಕೊರತೆಯಿಂದ ಸೊರಗುತ್ತಿರುವ ಸ್ಥಿತಿಯಲ್ಲಿವೆ. ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‌ಗಳಲ್ಲಿ ವಸತಿ ನಿಲಯ ಪಾಲಕರ ಕೊರತೆಯಿಂದಾಗಿ ವಿಧ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿ ತಲುಪುವಂತಾಗಿದೆ
ಜಿಲ್ಲೆಯಲ್ಲಿ ಒಟ್ಟು 105 ಸರ್ಕಾರಿ ಹಾಸ್ಟೆಲ್‌ಗಳಿದ್ದರೂ, ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವವರು ಕೇವಲ 32 ವಾರ್ಡನ್‌ಗಳು ಮಾತ್ರ. ಇದರ ಪರಿಣಾಮವಾಗಿ ಒಬ್ಬೊಬ್ಬ ವಾರ್ಡನ್ ಎರಡು ಅಥವಾ ಮೂರು ಹಾಸ್ಟೆಲ್‌ಗಳ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲ ತಾಲ್ಲೂಕುಗಳಲ್ಲಿ ಕಚೇರಿ ಸಿಬ್ಬಂದಿಯೇ ಹಾಸ್ಟೆಲ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಅತಿಯಾದ ಕೆಲಸದ ಒತ್ತಡದಿಂದ ವಾರ್ಡನ್‌ಗಳಿಗೆ ವಿದ್ಯಾರ್ಥಿಗಳ ಓದು, ಆರೋಗ್ಯ ಹಾಗೂ ದಿನನಿತ್ಯದ ಸಮಸ್ಯೆಗಳ ಕಡೆಗೆ ಸಮರ್ಪಕವಾಗಿ ಗಮನ ಹರಿಸಲು ಸಮಯವೇ ಸಿಗುತ್ತಿಲ್ಲ.
ಜಿಲ್ಲೆಯ 105 ಹಾಸ್ಟೆಲ್‌ಗಳಲ್ಲಿ 21 ಹಾಸ್ಟೆಲ್‌ಗಳು ಇಂದಿಗೂ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರೂ, ಈ ಕಟ್ಟಡಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೌಚಾಲಯ, ಅಡುಗೆಮನೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ.
ಅರಣ್ಯ ಪ್ರದೇಶ ಹೆಚ್ಚಿರುವ ಹಾಗೂ ಸರಿಯಾದ ಬಸ್ ಸಂಪರ್ಕವಿಲ್ಲದ ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಹಾಸ್ಟೆಲ್‌ಗಳೇ ದೊಡ್ಡ ಆಸರೆಯಾಗಿದೆ. ಆದರೆ, ವಿಶೇಷವಾಗಿ ಹುಡುಗಿಯರ ಹಾಸ್ಟೆಲ್‌ಗಳಲ್ಲಿ ಸಮಯಕ್ಕೆ ಸರಿಯಾಗಿ ಸ್ಪಂದಿಸುವ ವಾರ್ಡನ್‌ಗಳ ಕೊರತೆ ಅವರ ಭದ್ರತೆ ಕುರಿತು ಆತಂಕ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ಸರಿಯಾದ ಊಟದ ವ್ಯವಸ್ಥೆ ಇಲ್ಲದೆ, ಆರೋಗ್ಯದಲ್ಲಿ ಏರುಪೇರಾದಾಗ ಕೇಳುವವರಿಲ್ಲದಂತಾಗಿದೆ.“ಬಡ ಮಕ್ಕಳ ಶಿಕ್ಷಣದ ಜೊತೆ ಸರ್ಕಾರ ಆಟವಾಡಬಾರದು. ಕೂಡಲೇ ಪ್ರತಿಯೊಂದು ಹಾಸ್ಟೆಲ್‌ಗೆ ಖಾಯಂ ವಾರ್ಡನ್‌ಗಳನ್ನು ನೇಮಕ ಮಾಡಬೇಕು. ಬಾಡಿಗೆ ಕಟ್ಟಡಗಳನ್ನು ಬಿಟ್ಟು ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿ, ಅಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು” ಎಂದು ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸುತ್ತಿವೆ.
ಇನ್ನಾದರೂ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಹಾಸ್ಟೆಲ್‌ಗಳ ದುಸ್ಥಿತಿಯನ್ನು ಸುಧಾರಿಸುವತ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.





