ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿಯ ದಿನಾಚರಣೆಯ ಅಂಗವಾಗಿ ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
ಯುವ ಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ‍್ಯ ಚಳವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಸೇರಿದಂತೆ ಗಾಂಧಿಯವರ ಕುರಿತ ಹಲವು ವಿಚಾರ ಧಾರೆಗಳ ಕುರಿತು ಜ್ಞಾನ ವೃದ್ಧಿಸುವುದು ಈ ಸ್ಪರ್ಧೆಯ ಬಹುಮುಖ್ಯ ಉದ್ದೇಶವಾಗಿದೆ.
ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲು ಉದ್ದೇಶಿಸಲಾಗಿದೆ.
ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ 31 ಸಾವಿರ ರೂ. ದ್ವಿತೀಯ ಬಹುಮಾನ 21 ಸಾವಿರ ರೂ. ಮತ್ತು ತೃತೀಯ ಬಹುಮಾನ 11 ಸಾವಿರ ರೂ. ಹಾಗೂ ಜಿಲ್ಲಾ ಮಟ್ಟದಲ್ಲಿ, ಪ್ರಥಮ ಬಹುಮಾನ 3 ಸಾವಿರ ರೂ. ದ್ವಿತೀಯ ಬಹುಮಾನ 2 ಸಾವಿರ ರೂ ಮತ್ತು ತೃತೀಯ ಬಹುಮಾನ 1 ಸಾವಿರ ರೂ. ಬಹುಮಾನ ನೀಡಲಾಗುವುದು.

ಪ್ರೌಢ ಶಾಲಾ ವಿಭಾಗದಲ್ಲಿ ನೀಡಿರುವ ವಿಷಗಳು:
1) ಸ್ವಚ್ಛತೆಯ ಪಾಠ – ಗಾಂಧೀಜಿಯವರ ಸಂದೇಶ.
2) ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ.
3) ಗಾಂಧೀಜಿಯವರ ಸ್ವಾತಂತ್ರ‍್ಯದ ಕನಸು – ನನ್ನ ಕಲ್ಪನೆ.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 700 ರಿಂದ 800 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ:
1) ಅಸ್ಪೃಶ್ಯತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೋರಾಟ.
2) ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ.
3) ಬದಲಾವಣೆ ನನ್ನಿಂದಲೇ ಆರಂಭ – ಗಾಂಧೀಜಿಯವರ ಪಾಠ.
ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 900 ರಿಂದ 1000 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ:
1) ಗಾಂಧೀಜಿ ಕಂಡ ನ್ಯಾಯ ಸಮ್ಮತ ರಾಜಕೀಯ ವ್ಯವಸ್ಥೆ.
2) ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ – ತತ್ವಗಳ ಹೋಲಿಕೆ.
3) ಮೌಲ್ಯಾಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ – ಯುವಕರಿಗೆ ಗಾಂಧೀಜಿಯವರ ಪಾಠ.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 1400 ರಿಂದ 1500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ಇದನ್ನೂ ಓದಿ: ಉತ್ತರ ಕನ್ನಡ | ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನ
ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯ ಮಟ್ಟದಲ್ಲಿ ಮರು ಮೌಲ್ಯಮಾಪನ ಮಾಡಿ ರಾಜ್ಯ ಮಟ್ಟದ ಫಲಿತಾಂಶ ಘೋಷಿಸಲಾಗುವುದು. ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು (3) ಪ್ರಬಂಧಗಳಿಗೆ ಅಕ್ಟೋಬರ್ 2 ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರಬಂಧ ರಚನೆಕಾರರನ್ನು ಗೌರವಿಸಲಾಗುವುದು.
ನಿಬಂಧನೆಗಳು:
ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಆಕರವಾಗಿ ಬಳಸಿದ ಪರಾಮರ್ಶನ /ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು. ಆದರೆ, ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿ ಪರಾಮರ್ಶನ / ಆಧಾರ ಗ್ರಂಥಗಳು / ಮೊಬೈಲ್ ಬಳಕೆಗೆ ಅವಕಾಶವಿರುವುದಿಲ್ಲ. ಪ್ರಬಂಧಕಾರರ ಹೆಸರು, ವಿಳಾಸ ನಮೂದಿಸಿರಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಯ್ದಿರಿಸಿಕೊಂಡಿರುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ತಿಳಿಸಿದೆ.





