ಕುಮಟಾ ಪಟ್ಟಣದಿಂದ ಅಘನಾಶಿನಿ ಕಡೆಗೆ ಸಾಗುವ ಮುಖ್ಯ ರಸ್ತೆಯ ಹೊಂಡಗಳಿಗೆ ಚಿತ್ರಿಗಿಯ ‘ಬೆಳಕು’ ಗೆಳೆಯರ ಬಳಗ ತಂಡ ಭಾನುವಾರ ತಾತ್ಕಾಲಿಕ ಪರಿಹಾರ ಒದಗಿಸಿದೆ. ವಾಹನ ಸವಾರರು ಅನುಭವಿಸುತ್ತಿದ್ದ ಕಷ್ಟ ಅರಿತು, ಗ್ರಾಮಸ್ಥರು, ವಿದ್ಯಾರ್ಥಿಗಳು ಮತ್ತು ಯುವಕರ ಸಹಭಾಗಿತ್ವದಲ್ಲಿ ಬಳಗದ ಸದಸ್ಯರು ಹೊಂಡಗಳನ್ನು ಮುಚ್ಚುವ ಕಾರ್ಯ ಕೈಗೊಂಡರು.
ಮೂಡಗಣಪತಿ ದೇವಸ್ಥಾನದ ಬಳಿಯಿಂದ ಆರಂಭವಾದ ಈ ರಸ್ತೆ ದುರಸ್ತಿ ಕಾರ್ಯದಲ್ಲಿ, ತಂಡವು ಕುಮಟಾ-ಅಘನಾಶಿನಿ ಮುಖ್ಯ ರಸ್ತೆಯಲ್ಲಿರುವ ಕಲ್ಸಂಕ, ಚಿತ್ರಿಗಿ ಉದ್ಯಾನವನ ಕ್ರಾಸ್, ಚಿತ್ರಿಗಿ ಹೈಸ್ಕೂಲ್ ಬಳಿ ಮತ್ತು ಗಣಪತಿ ದೇವಸ್ಥಾನದ ಬಳಿ ರಸ್ತೆಯಲ್ಲಿದ್ದ ಹೊಂಡಗಳನ್ನು ಮುಚ್ಚಿದರು.
ಸ್ಥಳೀಯ ಆಡಳಿತದ ಗಮನಕ್ಕೆ ಬಂದಿದ್ದರೂ ಯಾವುದೇ ಸ್ಪಂದನೆ ದೊರೆಯದ ಕಾರಣ, “ನಮ್ಮೂರಿನ ತುರ್ತು ರಸ್ತೆ ರಿಪೇರಿ ನಮ್ಮದೇ” ಎಂಬ ಧ್ಯೇಯದೊಂದಿಗೆ ‘ಬೆಳಕು’ ಬಳಗವೇ ಈ ಜವಾಬ್ದಾರಿಯನ್ನು ಹೊತ್ತುಕೊಂಡು ಶ್ರಮಾದಾನ ಮಾಡಿದೆ.

‘ಬೆಳಕು’ ಚಿತ್ರಿಗಿ ಬಳಗವು ಕೈಗೊಂಡಿರುವ ಈ ಕಾರ್ಯ ಕೇವಲ ತಾತ್ಕಾಲಿಕ ಪರಿಹಾರ ಮಾತ್ರವಾಗಿದೆ. ವಾಹನ ಸವಾರರು ಸುಗಮವಾಗಿ ಸಂಚರಿಸುವಂತೆ ಮಾಡುವ ಸದುದ್ದೇಶದಿಂದ ಈ ಕಾರ್ಯ ಮಾಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಗಳು ರಸ್ತೆಯ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಬಳಗದ ಸದಸ್ಯರು ಮತ್ತು ಗ್ರಾಮಸ್ಥರು ವಿನಂತಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಕನ್ನಡ ತರ್ಜುಮೆ ತಂತ್ರಾಂಶ ʼಕನ್ನಡ ಕಸ್ತೂರಿʼ ಶೀಘ್ರದಲ್ಲೇ ಬಿಡುಗಡೆ
ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂದಿರುವ ‘ಬೆಳಕು’ ಬಳಗದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಹಳಕಾರದ PWD ಗುತ್ತಿಗೆದಾರ ಗಜಾನನ ಎಸ್ ಗುನಗಾ, ರಸ್ತೆಗೆ 80 ರಿಂದ 100 ಬುಟ್ಟಿ ಗ್ರಿಟ್ ಪೌಡರ್ ನೀಡಿರುತ್ತಾರೆ. ಪುರಸಭೆ ಮಾಜಿ ಅಧ್ಯಕ್ಷೆ ದಾಕ್ಷಾಯಣಿ ಆರಿಗ್ ಚಿತ್ರಿಗಿ, 70 ರಿಂದ 100 ಚಿರೆ ಕಲ್ಲುಗಳನ್ನು ಒದಗಿಸಿದ್ದಾರೆ. ನಾಗೇಶ್ ನಾಯ್ಕ್ ಲಗೇಜ್ ರಿಕ್ಷಾವನ್ನು ತಂಡಕ್ಕೆ ನೀಡಿ ಸಹಕರಿಸಿದ್ದಾರೆ. ತಂಡದ ಕೆಲಸಗಾರರಿಗೆ ಕುಮಟಾ-ಅಘನಾಶಿನಿ KSRTC ಚಾಲಕರು ನೀರಿನ ಬಾಟಲಿ ಮತ್ತು ಸಮೋಸ (ತಿಂಡಿ) ನೀಡಿರುತ್ತಾರೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲರಿಗೂ ‘ಬೆಳಕು’ ತಂಡ ಧನ್ಯವಾದ ಸಲ್ಲಿಸಿದೆ.





