ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲ್ಲೂಕಿನ ತಹಶೀಲದಾರ ಕಚೇರಿ ಎದುರು ಎರಡು ದಿನಗಳಿಂದ ಗ್ರಾಮಸ್ಥರು ನಡೆಸುತ್ತಿದ್ದ ಅಹೋರಾತ್ರಿ ಸತ್ಯಾಗ್ರಹಕ್ಕೆ ಮಂಗಳವಾರ ಕೊನೆ ದೊರಕಿದೆ. ಮೂಲಭೂತ ಸೌಕರ್ಯಕ್ಕಾಗಿ ಗ್ರಾಮಸ್ಥರು ಮಾಡುತ್ತಿದ್ದ ಧರಣಿಗೆ ತಾಲೂಕು ಅಧಿಕಾರಿಗಳು ಸ್ಪಂದಿಸಿದ್ದು, ರೈತ ಸಂಘದ ನಾಯಕರ ಹಾಗೂ ಗ್ರಾಮ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಕುರಿತು ಭರವಸೆ ನೀಡಿ ಪ್ರತಿಭಟನೆಯನ್ನು ಕೈ ಬಿಡುವಂತೆ ಮನವೊಲಿಸಲಾಗಿದೆ.
ಸಭೆಯಲ್ಲಿ ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾದ ರಸ್ತೆ, ಬಸ್‌ಸೇವೆ, ಸಂಪರ್ಕ ಸೌಲಭ್ಯ ಹಾಗೂ ಅರಣ್ಯ ಇಲಾಖೆಯ ತೊಡಕುಗಳ ಕುರಿತು ಚರ್ಚೆ ನಡೆಯಿತು. ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡರು. ಆದರೆ, ಮೂರು ವಾರಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜೋಯಡಾದಿಂದ ಹಳಿಯಾಳ ಶಾಸಕರ ಮನೆವರೆಗೆ ಪಾದಯಾತ್ರೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ನೀಡಲಾದ ಪ್ರಮುಖ ಭರವಸೆಗಳು: ಕಿರವತ್ತಿ–ಕಾರ್ಟೋಳಿ–ಡಿಗ್ಗಿ–ಗೋವಾ ಗಡಿ ರಸ್ತೆ: ಕಾಮಗಾರಿ ನವೆಂಬರ್ 25ರಿಂದ ಪ್ರಾರಂಭಿಸುವ ಭರವಸೆ. ಡಿಗ್ಗಿ–ವಾಗೇಲಿ ರಸ್ತೆ: ಡಾಂಬರೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಕೆ. ಕಿರವತ್ತಿ, ತೆರಾಳಿ, ಸಿಸೈ, ದುಧಮಾಳ ರಸ್ತೆ: ಗ್ರಾಮಪಂಚಾಯಿತಿ ಮತ್ತು ತಾಪಂ ಮಟ್ಟದಲ್ಲಿ ಯೋಜನೆ ರೂಪಿಸಲು ಸೂಚನೆ. ಗ್ರಾಮ ಬಸ್‌ಸೇವೆ: ಜೋಯಡಾದಿಂದ ಕಾರ್ಟೋಳಿ ಹಾಗೂ ಕುಂಡಲ ವಸತಿ ಮಾರ್ಗದಲ್ಲಿ ಬಸ್ ಸೇವೆ ಪ್ರಾರಂಭಿಸಲು ಕ್ರಮ. ಸಂಪರ್ಕ ಸೇವೆ: 17 ಬಿಎಸ್‌ಎನ್‌ಎಲ್ ಟವರ್‌ಗಳಿಗೆ ತ್ವರಿತ ಸಂಪರ್ಕ ಕಲ್ಪಿಸುವ ಭರವಸೆ. ಅರಣ್ಯ ಇಲಾಖೆಯ ತೊಡಕುಗಳು: ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗದಂತೆ ಕ್ರಮ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ
ಕುಣಬಿ ಸಮುದಾಯದ ಪರಿಶಿಷ್ಟ ಪಂಗಡ ಸೇರಿಕೆ: ಅದು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಇದೆ ಎಂದು ತಹಶೀಲದಾರರು ಸ್ಪಷ್ಟಪಡಿಸಿದರು. ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ರೈತ ಸಂಘದ ನಾಯಕರು, ಯಮುನಾ ಗಾಂವಕರ, ಪ್ರೇಮಾನಂದ ವೇಳಿಪ್, ತಿಲಕ್ ಗೌಡ, ಡಿ. ಸ್ಯಾಮ್ಸನ್ ಹಾಗೂ ಹಲವರು ಉಪಸ್ಥಿತರಿದ್ದರು.





