ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಡೆಯುವ ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಇಲಾಖೆ ಕಡಿವಾಣ ಹಾಕಿದೆ.
2025ನೇ ಸಾಲಿನ ಅಂಕಿ–ಅಂಶಗಳನ್ನು ಗಮನಿಸಿದರೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮಾದಕ ದ್ರವ್ಯ ಜಾಲ, ಅಕ್ರಮ ಮರಳುಗಾರಿಕೆ, ಜೂಜಾಟ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಮಾದಕ ದ್ರವ್ಯ ಜಾಲಕ್ಕೆ ಬ್ರೇಕ್: ಜಿಲ್ಲೆಯಲ್ಲಿ ಎನ್‌ಡಿಪಿಎಸ್ (NDPS) ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2024ರಲ್ಲಿ 87 ಇದ್ದ ಪ್ರಕರಣಗಳು 2025ರಲ್ಲಿ 295ಕ್ಕೆ ಏರಿಕೆಯಾಗಿವೆ.
ಈ ವರ್ಷ ಬರೋಬ್ಬರಿ 263 ಮಾದಕ ದ್ರವ್ಯ ಸೇವನೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ವ್ಯಸನಿಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯ ವೇಳೆ ಗಾಂಜಾ, ಚರಸ್ ಸೇರಿದಂತೆ ಭಾರೀ ಪ್ರಮಾಣದ ಅಮಲು ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.
ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಸಂಚಾರಿ ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಅತಿವೇಗ ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ 2025ರಲ್ಲಿ ಹೆಚ್ಚಾಗಿದೆ.
ಅತಿವೇಗದ ಚಾಲನೆಗೆ ಸಂಬಂಧಿಸಿದಂತೆ 182 ಪ್ರಕರಣಗಳು ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡಿದ 1,139 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 810 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಲಾಗಿದೆ.
ಸಂಚಾರಿ ನಿಯಮ ಉಲ್ಲಂಘನೆಯಿಂದ ಈ ವರ್ಷ 2.84 ಕೋಟಿ ರೂಪಾಯಿಗೂ ಅಧಿಕ ದಂಡವನ್ನು ಸಂಗ್ರಹಿಸಲಾಗಿದೆ.
ಜಿಲ್ಲೆಯಲ್ಲಿ ನಡೆದ ದರೋಡೆ, ಸರಗಳ್ಳತನ ಮತ್ತು ಮನೆಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2025ರಲ್ಲಿ ವರದಿಯಾದ 255 ಆಸ್ತಿ ಅಪರಾಧ ಪ್ರಕರಣಗಳಲ್ಲಿ ಸುಮಾರು 3.59 ಕೋಟಿ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದ್ದು, ಸಂತ್ರಸ್ತರಿಗೆ ಕಳೆದುಕೊಂಡ ವಸ್ತುಗಳನ್ನು ಮರಳಿಸಲಾಗಿದೆ.
2025ರಲ್ಲಿ ಒಟ್ಟು 51 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕರು ಸುಮಾರು 13.90 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಇವುಗಳಲ್ಲಿ ಪೊಲೀಸರು 1.27 ಕೋಟಿ ರೂಪಾಯಿಯನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಸುಮಾರು 50 ಲಕ್ಷ ರೂಪಾಯಿಯನ್ನು ವಂಚನೆಗೆ ಒಳಗಾದವರಿಗೆ ಮರಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಮಂಕಾಳ ವೈದ್ಯ ಭರವಸೆ
ಜಿಲ್ಲೆಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. ಜಿಲ್ಲೆಯ ಶೇ. 100ರಷ್ಟು ಮನೆಗಳಿಗೆ (3,57,944 ಮನೆಗಳು) ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಾಗಿದೆ. ಒಟ್ಟು 1,233 ಗುಂಪು ಸಭೆಗಳನ್ನು ನಡೆಸಲಾಗಿದ್ದು, ಸಾರ್ವಜನಿಕರಿಂದ ಬಂದ ದೂರುಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
2025ರಲ್ಲಿ ವರದಿಯಾದ 332 ಕಾಣೆಯಾದ ಪ್ರಕರಣಗಳಲ್ಲಿ 301 ಜನರನ್ನು (ಶೇ. 91) ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ಲೈಂಗಿಕ ಕಿರುಕುಳ ಹಾಗೂ ಪೋಕ್ಸೋ (POCSO) ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ ಶೇ. 100ರಷ್ಟು ಪತ್ತೆ ಕಾರ್ಯ ನಡೆದಿದೆ. ಶಿರಸಿ, ಕಾರವಾರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟಾರೆಯಾಗಿ, ಉತ್ತರ ಕನ್ನಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳು ಅಂಕಿ–ಅಂಶಗಳ ಸಹಿತ ಮಾಹಿತಿ ನೀಡಿದ್ದಾರೆ.





