ಬೆಳಗಾವಿಯ ಬಹು ದಿನದ ಬೇಡಿಕೆಯಾಗಿದ್ದ ವಂದೇ ಭಾರತ್ ರೈಲು ಸಂಚಾರಕ್ಕೆ ಭಾನುವಾರ ಚಾಲನೆ ದೊರತಿದ್ದು, ಬೆಳಗಾವಿ–ಬೆಂಗಳೂರು ನಡುವೆ ನೂತನವಾಗಿ ಸಂಚಾರ ಆರಂಭಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಗಣ್ಯರ ಸಮ್ಮುಖದೊಂದಿಗೆ ಸ್ವಾಗತಿಸಲಾಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, “ರೈಲುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಂಟು ಸಾವಿರ ಕೋಟಿ ರೂಪಾಯಿ ವಿನಿಯೋಗಿಸಿದ್ದು, ಶೇ.99ರಷ್ಟು ಹಳಿಗಳು ವಿದ್ಯುದ್ದೀಕರಣವಾಗಿವೆ. ಇದು ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ” ಎಂದರು.
“ಬೆಂಗಳೂರು–ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಯವರೆಗೂ ವಿಸ್ತರಿಸಲಾಗಿದೆ. ಜತೆಗೆ ಮೂಲಸೌಕರ್ಯ ಸುಧಾರಿಸಿ ಹೊಸ ರೈಲನ್ನು ಓಡಿಸಲಾಗುತ್ತಿದೆ. ಸೆಮಿ ಹೈಸ್ಪೀಡ್ ವಂದೇ ಭಾರತ್ ನೂತನ ರೈಲಿನಲ್ಲಿ ಬೆಳಗಾವಿಯಿಂದ ಬೆಂಗಳೂರಿನ ಪ್ರಯಾಣಕ್ಕೆ ಸಾಮಾನ್ಯ ರೈಲಿಗಿಂತ ಎಂಬತ್ತು ನಿಮಿಷ ಉಳಿತಾಯವಾಗಲಿದ್ದು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಭಾಗದ ಜನರು, ಉದ್ಯಮಿಗಳ ಓಡಾಟಕ್ಕೆ ಅನುಕೂಲವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಕ್ರೀಡೆಯಿಂದ ಮಾನಸಿಕ ದೈಹಿಕ ಸದೃಢತೆ ಸಾಧ್ಯ: ಅಬ್ದುಲ್ ರಹೆಮಾನ್
ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಉಪ ಮೇಯರ್ ಸಂತೋಷ ಚವ್ಹಾಣ, ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ, ತಿಪ್ಪಣ್ಣ ಮಜ್ಜಗಿ, ಬೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಗುಂಡೂರ ಇದ್ದರು.





