ವಾರಾಹಿ ನದಿ ಆಧಾರಿತ ಸಿದ್ದಾಪುರ ಏತ ನೀರಾವರಿ ಯೋಜನೆಗೆ ತಾನು ವಿರೋಧಿಯಾಗಿಲ್ಲ, ಆದರೆ ಮೂಲ ವಾರಾಹಿ ಯೋಜನೆಯ ಆಶಯಕ್ಕೆ ಧಕ್ಕೆಯಾಗುವ ಯಾವುದೇ ಕಾಮಗಾರಿ ನಡೆದರೆ ನದಿ ಪಾತ್ರದ ಜನರು ನೀರಿಗಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ವಾರಾಹಿ ಅಣೆಕಟ್ಟಿನ ಕೆಳಭಾಗದ ನದಿ ಪಾತ್ರದ ಗ್ರಾಮ ಪಂಚಾಯತ್‌ಗಳ ರೈತರು, ಪಂಚಾಯತ್ ಕುಡಿಯುವ ನೀರಿನ ಫಲಾನುಭವಿಗಳು, ಸೌಕೂರು ಏತ ನೀರಾವರಿ ಯೋಜನೆಯ ಫಲಾನುಭವಿಗಳು ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಫಲಾನುಭವಿಗಳ ನೇತೃತ್ವದಲ್ಲಿ ಕುಂದಾಪುರ ತಾಲೂಕಿನ ಕಂಡ್ಲೂರಿನಲ್ಲಿ ನಡೆದ ಬೃಹತ್ ಜನಾಂದೋಲನ ಸಭೆಯಲ್ಲಿ ಈ ವಿಚಾರಗಳು ತೀವ್ರವಾಗಿ ಪ್ರತಿಧ್ವನಿಸಿವೆ.

ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸಿದ್ದಾಪುರ ಏತ ನೀರಾವರಿ ಯೋಜನೆಗೆ ನನ್ನ ವಿರೋಧವಿಲ್ಲ ಎಂಬುದನ್ನು ನಾನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೆ ವಾರಾಹಿ ಮೂಲ ಯೋಜನೆಯ ಆಶಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಹೊಸ ಕಾಮಗಾರಿಗಳು ನಡೆದರೆ ಅಣೆಕಟ್ಟಿನ ಕೆಳಭಾಗದ ಜನರಿಗೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲರಿಗೂ ನೀರು ಸಿಗಬೇಕು ಎಂಬುದೇ ನನ್ನ ಕಳಕಳಿ ಎಂದು ಹೇಳಿದರು.
ಸಿದ್ದಾಪುರದ ಶೇ.70 ಭಾಗಕ್ಕೆ ಈಗಾಗಲೇ ವಾರಾಹಿ ನೀರು ಸಿಗುತ್ತಿಲ್ಲ. ಬಲದಂಡೆ ಯೋಜನೆ, ಶಂಕರನಾರಾಯಣ, ಅಂಪಾರು ಭಾಗಗಳಿಗೂ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೊಳೆ ಶಂಕರನಾರಾಯಣ ದೇವಸ್ಥಾನ ಸಹಿತ ಅಣೆಕಟ್ಟಿನ ಕೆಳಭಾಗದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎನ್ನುವುದೇ ತನ್ನ ಉದ್ದೇಶ ಎಂದು ಅವರು ತಿಳಿಸಿದರು.
2023ರಲ್ಲಿ ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು 2025ರಲ್ಲಿ ನೆನಪಿಸಿದ್ದೇನೆ. ಅದಕ್ಕಾಗಿ ತಜ್ಞರ ಸಮಿತಿಯನ್ನು ನೇಮಿಸಿದ್ದು ಸ್ವಾಗತಾರ್ಹ. ಆದರೆ ಆ ಸಮಿತಿಯಲ್ಲಿ ಸುರತ್ಕಲ್ ಎನ್‌ಐಟಿಕೆಯ ತಜ್ಞರನ್ನು ಸೇರಿಸಬೇಕು ಎನ್ನುವುದು ನನ್ನ ಸ್ಪಷ್ಟವಾದ ಒತ್ತಾಯ ಎಂದು ಹೇಳಿದರು.

ಬಿಜೆಪಿಯಿಂದ ಅಪಪ್ರಚಾರ ಆರೋಪ : “ನಾನು ಹಲವಾರು ಅಣೆಕಟ್ಟುಗಳನ್ನು ತಂದೆ ಎಂದು ಹೇಳುತ್ತಿದ್ದಾರೆ. ಯಾವವು ಎನ್ನುವುದನ್ನು ಅವರೇ ಪಟ್ಟಿಕೊಡಲಿ. ನಾನು ಶಾಸಕನಾಗಿದ್ದಾಗ ಸುಬ್ಬರಾಡಿ, ರಾಜಾಡಿ, ಆಜಿ, ಹೆಮ್ಮಾಡಿಕಟ್ಟು, ಶಾರದಾಪುರ, ಬಿಜೂರು ಅಣೆಕಟ್ಟುಗಳಿಗೆ ಅನುದಾನ ಮಂಜೂರಾಗಿತ್ತು. ಸೌಕೂರು ಏತ ನೀರಾವರಿ ಯೋಜನೆಯ ಡಿಪಿಆರ್ ಕೂಡ ಆಗಲೇ ಸಿದ್ಧವಾಗಿತ್ತು. ಈಗಿನ ಶಾಸಕರು ಮಾಡಿದ್ದು ಯಾವುದು ಎಂದು ಹೇಳಲಿ ಎಂದು ಸವಾಲು ಹಾಕಿದರು.

ಈದಿನ.ಕಾಮ್ ಜೊತೆ ಮಾತನಾಡಿದ ರೈತ ಮುಖಂಡ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ, ವಾರಾಹಿ ಮೂಲ ಯೋಜನೆಯಂತೆ 38 ಸಾವಿರ ಎಕರೆ ಭೂಮಿಗೆ ನೀರು ಹೋಗಬೇಕು. ಆದರೆ ಈಗ ಶೇ.30 ಕಾಮಗಾರಿ ಮಾತ್ರ ನಡೆದಿದೆ. ಹೊಸ ಕಾಮಗಾರಿಗಳು ಮುಂದುವರಿದರೆ ಮೂಲ ಯೋಜನೆಯಂತೆ ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಅಣೆಕಟ್ಟಿಗೆ ಅಪಾಯವಾಗುವ ರೀತಿಯಲ್ಲಿ ಕಲ್ಲು ಸ್ಪೋಟ ನಡೆಸಲಾಗುತ್ತಿದೆ. ಸೌಕೂರು ಏತ ನೀರಾವರಿಯಿಂದ 8 ಗ್ರಾಮಗಳಿಗೆ ನೀರು ಹೋಗುತ್ತದೆ. ಈಗ ನಡೆಯುತ್ತಿರುವ ವಾರಾಹಿ ಕಾಮಗಾರಿಯಿಂದ ಕೋಟೇಶ್ವರದವರೆಗೂ ನೀರು ಹೋಗುತ್ತಿದೆ. ಆದರೆ ಹೋರಿಯಬ್ಬೆ ಡ್ಯಾಂನ ಕೆಳಭಾಗದ ಮಚ್ಚಟ್ಟು, ಅಮಾಸೆಬೈಲು, ರಟ್ಟಾಡಿ, ಹಾಲಾಡಿ, 76 ಹಾಲಾಡಿ, ಹಾರ್ದಳ್ಳಿ–ಮಂಡಳ್ಳಿ, ಮೊಳಹಳ್ಳಿ, ಜಪ್ತಿ, ಬಳ್ಳೂರು, ಬನ್ನೂರು, ಹಟ್ಟಿಕುದ್ರು, ಆನಗಳ್ಳಿ, ಗುಲ್ವಾಡಿ, ಸಿದ್ದಾಪುರ, ಉಳ್ಳೂರು–74, ಶಂಕರನಾರಾಯಣ, ಕುಳ್ಳಂಜೆ, ಅಂಪಾರು, ಹಳ್ಳಾಡು, ಕಾವ್ರಾಡಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಗಂಭೀರ ಸಮಸ್ಯೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ಸಿದ್ದಾಪುರಕ್ಕೆ ಏತ ನೀರಾವರಿ ಬೇಕು ಎನ್ನುವುದು ನಮ್ಮ ಆಗ್ರಹ. ಆದರೆ ಅದು ಇತರ ಪ್ರದೇಶಗಳ ಹಕ್ಕಿನ ನೀರನ್ನು ಕಿತ್ತುಕೊಳ್ಳುವ ರೀತಿಯಲ್ಲಿ ಇರಬಾರದು ಎಂದು ಹೇಳಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಾರಾಹಿ ನೀರನ್ನು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಬೇರೆ ಭಾಗಗಳಿಗೆ ಕೊಂಡೊಯ್ಯುವ ಮೊದಲು ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ನೀರು ಅಗತ್ಯವಿರುವೆಡೆ, ಬಿಟ್ಟು ಹೋಗಿರುವ ಪ್ರದೇಶಗಳನ್ನು ಸೇರಿಸಿ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ಡಿಪಿಆರ್ ಸಿದ್ಧಪಡಿಸಿ ಕಾರ್ಯಗತಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಸ್ವಾರ್ಥಕ್ಕಾಗಿ ನಾನು ಯಾರಿಗೂ ಪತ್ರ ಬರೆದಿಲ್ಲ. ಯಾವುದೇ ಕಾರಣಕ್ಕೂ ಪತ್ರ ವಾಪಾಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಸರಕಾರದ ಆದೇಶದಂತೆ ಪ್ರಸ್ತುತ ಆರಂಭವಾಗಿರುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ತಜ್ಞರ ಸಮಿತಿ ವರದಿ ನೀಡುವವರೆಗೆ ಕಾಮಗಾರಿಗೆ ಸಂಬಂಧಿಸಿದ ಒಂದೂ ನಯಾ ಪೈಸೆ ಬಿಲ್ ಪಾವತಿ ಮಾಡಬಾರದು ಎಂದು ಆಗ್ರಹಿಸಿದರು.
ಸಂಸದ ರಾಘವೇಂದ್ರ ಅವರ ಮೇಲೆ ಒತ್ತಡ ತಂದು, ಬೆರಳೆಣಿಕೆಯ ಪ್ರಭಾವಿಗಳಿಗೆ ಮಾತ್ರ ಉಪಯೋಗವಾಗುವ ರೀತಿಯಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ರೂಪಿಸಲಾಗಿದೆ ಎಂದು ಅವರು ಆರೋಪಿಸಿದರು.
ಸರಕಾರದ ನಿಲುವು: ತಜ್ಞರ ವರದಿ ನಂತರವೇ ತೀರ್ಮಾನ

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ, ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರಕಾರ ತಜ್ಞರ ಸಮಿತಿಯ ಅಭಿಪ್ರಾಯ ಪಡೆಯಲು ಸೂಚಿಸಿದೆ. ತಜ್ಞರ ಸಮಿತಿಯ ವರದಿ ಆಧರಿಸಿ ಸಾಧಕ–ಬಾಧಕಗಳನ್ನು ಪರಿಶೀಲಿಸಿ, ಯಾವುದೇ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಜ್ಞರ ತಂಡ ವರದಿ ಸಲ್ಲಿಸುವವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಕರ್ನಾಟಕ ನೀರಾವರಿ ನಿಗಮದಿಂದ ಆದೇಶ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ, ಸಿದ್ದಾಪುರ ಏತ ನೀರಾವರಿ ಯೋಜನೆ ಅಭಿವೃದ್ಧಿಯ ಹೆಸರಿನಲ್ಲಿ ವಾರಾಹಿ ಮೂಲ ಯೋಜನೆಯ ಗುರಿ ಮರೆತು ಹೋಗುತ್ತಿದೆಯೇ? ಅಣೆಕಟ್ಟಿನ ಕೆಳಭಾಗದ ರೈತರ ಹಾಗೂ ಕುಡಿಯುವ ನೀರಿನ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆಯೇ? ಎಂಬ ಪ್ರಶ್ನೆಗಳು ಇದೀಗ ತೀವ್ರಗೊಂಡಿವೆ.
ತಜ್ಞರ ಸಮಿತಿ ವರದಿ ಮೇಲೆ ಇದೀಗ ಸಾವಿರಾರು ರೈತರ ಭವಿಷ್ಯ, ಕೃಷಿ ಮತ್ತು ಕುಡಿಯುವ ನೀರಿನ ಭದ್ರತೆ ಅವಲಂಬಿತವಾಗಿದೆ. ನದಿ ನೀರು ರಾಜಕೀಯದ ಅಸ್ತ್ರವಾಗದೆ, ರೈತರ ಜೀವಾಳವಾಗಬೇಕೆಂಬುದೇ ನಮ್ಮ ಆಶಯ


ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




