"ಮನರೇಗಾ ಹೆಸರು ಬದಲಾವಣೆ ವಿಷಯವನ್ನು ಕರ್ನಾಟಕ ವಿಧಾನಸಭೆಯ ಚಳಿಗಾಲ ಅಧಿವೇಶನದಲ್ಲೂ ಎತ್ತಿ ಚರ್ಚಿಸಲಾಗುವುದು. ಅಲ್ಲದೆ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು"
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)ವನ್ನು ವಿಬಿ ಜಿ ರಾಮ್ ಜಿ ಎಂದು ಮರುನಾಮಕರಣ ಮಾಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಬೆಳಗಾವಿಯ ಸುವರ್ಣ ಸೌಧದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.
“ಮನರೇಗಾ ಕಾಯಿದೆಯ ಮರುನಾಮಕರಣ ಮಾಡಿರುವ ಬಿಜೆಪಿ ನೇತೃತ್ವದ ಸರ್ಕಾರವು ಮಹಾತ್ಮ ಗಾಂಧಿಯವರ ಪರಂಪರೆಯನ್ನು ದುರ್ಬಲಗೊಳಿಸುತ್ತಿರುವುದರ ಜತೆಗೆ ಒಂದು ಮಹತ್ವದ ಕಲ್ಯಾಣ ಕಾಯಿದೆಯನ್ನೇ ಬುಡಮೇಲು ಮಾಡಲು ಹೊರಟಿದೆ” ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
ಸಚಿವ ಎಂ ಬಿ ಪಾಟೀಲ್ ಮಾತನಾಡಿ, “ಮಹಾತ್ಮ ಗಾಂಧಿ ರಾಷ್ಟ್ರಪಿತ. ಮನರೇಗಾ ಗ್ರಾಮೀಣ ಪ್ರದೇಶಗಳಗಳನ್ನೊಳಗೊಂಡ ದೇಶವಾಗಿರುವ ಭಾರತದಾದ್ಯಂತ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುವ ಯಶಸ್ವಿ ಕಾರ್ಯಕ್ರಮ. ಇದು ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿದ್ದು, ಸ್ಥಳೀಯವಾಗಿ ಉದ್ಯೋಗ ಒದಗಿಸುವ ಯಶಸ್ವಿ ಕಾರ್ಯಕ್ರಮವಾಗಿತ್ತು. ಇದನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಅದರ ಹೆಸರನ್ನು ಬದಲಾಯಿಸಿದೆ” ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, “ನ್ಯಾಷನಲ್ ಹೆರಾಲ್ಡ್ ಭಾರತದ ಸ್ವಾತಂತ್ರ್ಯ ಚಳವಳಿಗೆ ನಿಕಟ ಸಂಬಂಧ ಹೊಂದಿದೆ. ನ್ಯಾಷನಲ್ ಹೆರಾಲ್ಡ್ ದೇಶದ ಹೆಮ್ಮೆ. ಇದನ್ನು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಜವಾಹರಲಾಲ್ ನೆಹರು ಸ್ಥಾಪಿಸಿದರು” ಎಂದು ಹೇಳಿದ ಅವರು, ಪ್ರಕರಣದಲ್ಲಿ ಕೇಂದ್ರ ಸಂಸ್ಥೆಗಳ ಕ್ರಮಗಳನ್ನು ಪ್ರಶ್ನಿಸಿದರು.
“ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜವಾಹರಲಾಲ್ ನೆಹರೂ ಅವರು 1937ರಲ್ಲಿ ಸ್ಥಾಪಿಸಿದ ಪತ್ರಿಕೆಯನ್ನು ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಆಸ್ತಿಯನ್ನಾಗಿ ಮಾಡಿ, ಸೋನಿಯಾ ಗಾಂಧೀ ಮತ್ತು ರಾಹುಲ್ ಗಾಂಧೀ ಅವರನ್ನು ತೊಂದರೆಗೆ ಒಳಪಡಿಸುವುದು ದ್ವೇಷದ ರಾಜಕಾರಣ. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಇ ಡಿ ಕೇಸ್ ತಿರಸ್ಕರಿಸಿರುವುದು, ಬಿಜೆಪಿಗೆ ಮುಖಭಂಗವಾಗಿದೆ” ಎಂದು ಡಿ ಕೆ ಶಿವಕುಮಾರ್ ಹೇಳಿದರು.
“ನಾನು ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತೇನೆ: ಅವರು ಇನ್ನೂ ಎಫ್‌ಐಆರ್ ಪ್ರತಿಯನ್ನು ಏಕೆ ನೀಡಿಲ್ಲ. ಇಂತಹ ಕ್ರಮಗಳಿಂದಾಗಿ ಜಾರಿ ನಿರ್ದೇಶನಾಲಯದ ಪ್ರತಿಷ್ಠೆ ಕಳಂಕಿತವಾಗಿದೆ” ಎಂದು ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿದ್ದೀರಾ? ಹಾವೇರಿ | ಮನರೇಗಾ ಬದಲಾಗಿ, ವಿಬಿ ಜಿಆರಎಎಂ ಮಸೂದೆ ಮಂಡಿಸಲು ಮುಂದಾದ ಕೇಂದ್ರ ಸರಕಾರದ ನಡೆ ಖಂಡನೀಯ: ಬಸವರಾಜ್ ಪೂಜಾರ
“ಮನರೇಗಾ ಹೆಸರು ಬದಲಾವಣೆ ವಿಷಯವನ್ನು ಕರ್ನಾಟಕ ವಿಧಾನಸಭೆಯ ಚಳಿಗಾಲ ಅಧಿವೇಶನದಲ್ಲೂ ಎತ್ತಿ ಚರ್ಚಿಸಲಾಗುವುದು. ಅಲ್ಲದೆ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು” ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕರು ಪ್ಲೇಕಾರ್ಡ್‌ಗಳನ್ನು ಹಿಡಿದು ಘೋಷಣೆ ಕೂಗಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಶಾಸಕರು ಇದ್ದರು.





