ಹೆಸರಾಂತ ಹಿರಿಯ ನಟಿ ಹೇಮಾ ಚೌಧುರಿ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಹೇಮಾ ಚೌಧುರಿ ಅವರು 70ರ ದಶಕದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ‘ಅಮೃತವರ್ಷಿಣಿ’ ಧಾರಾವಾಹಿ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಹೇಮಾ ಚೌಧುರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಈ ಹಿನ್ನೆಲೆ, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೇಮಾ ಅವರ ಮಗ ಐರ್ಲೆಂಡ್ನಲ್ಲಿ ಇದ್ದು, ಅವರ ಬರುವಿಕೆಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನ : ರಾಘವೇಂದ್ರ ಶೆಟ್ಟಿಗಾರ್
ಇತ್ತೀಚೆಗೆ ನಟಿ ಲೀಲಾವತಿ ಅವರು ನಿಧನ ಹೊಂದಿದರು. ಲೀಲಾವತಿಯವರ 11ನೇ ದಿನದ ಕಾರ್ಯಕ್ಕೆ ಹೇಮಾ ಅವರು ಆಗಮಿಸಿದ್ದರು. ವಿನೋದ್ ರಾಜ್ಗೆ ಸಾಂತ್ವನ ಹೇಳಿದ್ದರು. ಈಗ ಅವರಿಗೆ ಏಕಾಏಕಿ ಈ ರೀತಿ ಆಗಿದ್ದು ಆಘಾತ ಉಂಟುಮಾಡಿದೆ.




