ಕನ್ನಡತನವನ್ನು, ಕನ್ನಡದ ಹಿರಿಮೆ-ಗರಿಮೆಯನ್ನು ನಮ್ಮ ಮುಂದಿನ ಜನಾಂಗಕ್ಕೆ ತಲುಪಿಸುವ ಬಹುದೊಡ್ಡ ಜವಾಬ್ದಾರಿ ಕನ್ನಡ ವಿಶ್ವವಿದ್ಯಾಲಯಕ್ಕಿದೆ ಎಂದು ವಿಜಯನಗರ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದ ಮುಂಭಾಗದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ರಾಜ್ಯದ ಇತರೆಡೆಗಳಲ್ಲಿ ವರ್ಷಕ್ಕೆ ಒಮ್ಮೆ ಕನ್ನಡ ರಾಜ್ಯೋತ್ಸವನ್ನು ಆಚರಿಸಿದರೆ ನಮ್ಮ ವಿಶ್ವವಿದ್ಯಾಲಯದಲ್ಲಿ 365 ದಿನವೂ ಕನ್ನಡ ರಾಜ್ಯೋತ್ಸವವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕನ್ನಡಕ್ಕೆ ಸಂಬಂಧಪಟ್ಟ ಯೋಜನೆ ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿದೆ. ಕನ್ನಡ ರಾಜ್ಯೋತ್ಸವ ನಮ್ಮಲ್ಲಿ ಕನ್ನಡತನದ ಪ್ರಜ್ಞೆಯನ್ನು, ಪ್ರೀತಿಯನ್ನು ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ” ಎಂದರು.
“ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಬೋಧಿಸಲು ಸಾಧ್ಯವಿಲ್ಲ ಎಂಬ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಸಾಹಿತ್ಯವೂ ಸೇರಿದಂತೆ ಕನ್ನಡಿಗರು ಪ್ರತಿನಿತ್ಯ ಬಳಸುವ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಪ್ರಾರಂಭಿಸಿತು. ಈ ಕೆಲಸ ಹೆಚ್ಚು ಹುರುಪಿನಿಂದ, ಉಮೇದಿನಿಂದ ಮಾಡುವಂತಹ ಸಮಯ ಈಗ ಒದಗಿಬಂದಿದೆ. ಹೀಗಾಗಿ ಇನ್ನುಮುಂದೆ ಹೆಚ್ಚಿನ ರೀತಿಯಲ್ಲಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಆದರೆ, ಇದಕ್ಕೆ ಹಲವಾರು ಅಡಚಣೆಗಳು ಎದುರಾಗಿವೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆ, ತಾತ್ಕಾಲಿಕ ನೌಕರರ ಸಂಬಳದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕಠಿಣ ಪರಿಸ್ಥಿತಿಯ ನಡುವೆಯೂ ಸಹ ಕನ್ನಡ ವಿಶ್ವವಿದ್ಯಾಲಯವು ಕನ್ನಡತ್ವವನ್ನು ಉಳಿಸಿಕೊಂಡು, ಕನ್ನಡದ ಬೆಳವಣಿಗೆಗಾಗಿ ಸದಾ ಶ್ರಮಿಸುತ್ತಿದೆ” ಎಂದರು.
ಇದನ್ನೂ ಓದಿ: ವಿಜಯನಗರ | ಹಂಪಿಯಲ್ಲಿ ಮಹಾರಾಷ್ಟ್ರ ಮೂಲದ ಯುವಕ ನಾಪತ್ತೆ
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಬಿ. ಗುರುಬಸಪ್ಪ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಆರ್.ವಿ. ದೇಶಪಾಂಡೆ ಹಾಗೂ ಸಂಗೀತ ವಿಭಾಗದ ವಿದ್ಯಾರ್ಥಿಗಳು ಇದ್ದರು.





