ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ. ಬಡ ವಿದ್ಯಾರ್ಥಿಗಳ ನೈತಿಕ ಶಿಕ್ಷಣವನ್ನು ಕಿತ್ತುಕೊಂಡಂತೆ ಅವೈಜ್ಞಾನಿಕ ನೀತಿಯನ್ನು ಜಾರಿಗೆ ತಂದು ಮೂಲಭೂತ ಶಿಕ್ಷಣವನ್ನೂ ಕಿತ್ತುಕೊಳ್ಳುತ್ತಿದೆ ಎಂದು ಪ್ರಗತಿಪರ ಚಿಂತಕ ಡಾ. ಎಸ್ ಬಿ ಚಂದ್ರಶೇಖರ್ ಎಂದು ಆರೋಪಿಸಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎಐಡಿಎಸ್ಒ ಜಿಲ್ಲಾ ಪ್ರಥಮ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, “ಹಿಂದೆ 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಮೂಲಕ ದೊಡ್ಡ ಮಟ್ಟದಲ್ಲಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಹೋರಾಟ ಮಾಡಿ 6,200 ಸರ್ಕಾರಿ ಶಾಲೆಗಳನ್ನು ಉಳಿಸಿದೆ. ಇದು ವಿದ್ಯಾರ್ಥಿಗಳ ಒಗ್ಗಟ್ಟಿನಿಂದ ಯಶಸ್ವಿಯಾಗಿದೆ. ಈಗ ಮತ್ತೆ ರಾಜ್ಯ ಸರ್ಕಾರ ಕೆಪಿಎಸ್-ಮ್ಯಾಗ್ನೆಟ್ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ಮಕ್ಕಳಿಂದ ಶಿಕ್ಷಣವನ್ನು ಕಸಿದುಕೊಳ್ಳುತ್ತಿದೆ. ದೇಶ ಅಭಿವೃದ್ಧಿ ಹೊಂದಬೇಕೆಂದರೆ ಆ ದೇಶದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು. ಶಿಕ್ಷಣ ನಮ್ಮ ಹಕ್ಕು, ಈ ಶಿಕ್ಷಣ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಒಂದಾಗಬೇಕು” ಎಂದು ಹೇಳಿದರು.
ಎಐಡಿಎಸ್ಓ ರಾಜ್ಯ ಅಧ್ಯಕ್ಷ ಕೆ ಎಸ್ ಅಶ್ವಿನಿಯವರು ಮುಖ್ಯ ಅತಿಥಿಗಳಾಗಿ ಮಾತನಾಡಿ, “ಹಿಂದೆ ಸಾವಿತ್ರಿ ಬಾಯಿ ಫುಲೆ, ಜ್ಯೋತಿಬಾ ಫುಲೆ ಮತ್ತು ವಿದ್ಯಾಸಾಗರ್‌ರಂತಹ ಹಲವಾರು ಮಹಾನ್ ವ್ಯಕ್ತಿಗಳು ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಎಲ್ಲ ಕಡೆ ಶಾಲೆಗಳನ್ನು ತೆರೆಯಲು ಹೋರಾಡಿದರು. ಆದರೆ ಈಗಿನ ಸರ್ಕಾರಗಳು ಇಂತಹ ಮಹಾನ್ ವ್ಯಕ್ತಿಗಳ ವಿಚಾರದ ವಿರುದ್ಧವಾಗಿ ಶಾಲೆಗಳನ್ನು ಮುಚ್ಚುತ್ತಿವೆ. ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 6,000 ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಈ ಮೂಲಕ ಬಡ ಮಕ್ಕಳ ಶಿಕ್ಷಣದ ಕನಸನ್ನು ಕಸಿದುಕೊಳ್ಳಲು ಮುಂದಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ರಾಜ್ಯದ ವಿದ್ಯಾರ್ಥಿ ಮತ್ತು ಜನತೆಯ ಮೇಲಿದೆ” ಎಂದು ಕರೆಕೊಟ್ಟರು.
ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, “ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂಬ ಸರ್ಕಾರದ ಸ್ಪಷ್ಟನೆ, ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು, ಹೇಳುತ್ತಿರುವ ಮಾತು ಸತ್ಯಕ್ಕೆ ದೂರವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾವ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಬೇಕು ಮತ್ತು ಆ ಶಾಲೆಗೆ ಯಾವ ಯಾವ ಶಾಲೆಗಳನ್ನು ಸೇರಿಸಬೇಕು ಎಂಬುದರ ಪೂರ್ಣ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ. ಶಾಲೆಗಳ ಅಭಿವೃದ್ಧಿಯ ಹೆಸರಲ್ಲಿ ರಾಜ್ಯದ ಜನತೆಯನ್ನು ವಂಚಿಸಿ ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಸಿದುಕೊಳ್ಳುವ ಸರ್ಕಾರದ ಘೋರ ಹುನ್ನಾರ ಇದಾಗಿದೆ. ಮುಚ್ಚುತ್ತಿರುವ 40 ಸಾವಿರ ಸರ್ಕಾರಿ ಶಾಲೆಗಳ ಸಂಪೂರ್ಣ ಪಟ್ಟಿಯನ್ನು ಎಐಡಿಎಸ್‌ಓ ನಾಡಿನ ಜನತೆಯಮುಂದೆ ಇಟ್ಟು ಕೆಪಿಎಸ್-ಮ್ಯಾಗ್ನೆಟ್ ಯೋಜನೆಯ ಕರಾಳ ವಾಸ್ತವವನ್ನು ಬಯಲಿಗೆಳೆದಿದೆ. ಈಗ ಸರ್ಕಾರದ ಉತ್ತರವೇನು ಎಂಬುದು ನಾಡಿನ ಜನತೆಯ ಪ್ರಶ್ನೆ” ಎಂದರು.
ಎಐಡಿಎಸ್ಓ ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, “ಸರ್ಕಾರ ಶಿಕ್ಷಣದ ಮೇಲೆ ಪ್ರಹಾರ ನಡೆಸಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕುಂದಾಪುರ–ಕೋಟ ಭಾಗಕ್ಕೆ ಶಕ್ತಿ ಯೋಜನೆಯಡಿ KSRTC ಬಸ್ ಮಂಜೂರು
ಸಮ್ಮೇಳನದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಬೇಕು ಹಾಗೂ ಇನ್ನಿತರ ವಿದ್ಯಾರ್ಥಿಗಳ ಬೇಡಿಕೆಯ ಗೊತ್ತುವಳಿಗಳನ್ನು ಮಂಡಿಸಲಾಯಿತು.
ಅಧ್ಯಕ್ಷ ರವಿಕಿರಣ್ ಜೆಪಿ, ಕಾರ್ಯದರ್ಶಿ ಉಮಾದೇವಿ ಯು, ಜಂಟಿ ಕಾರ್ಯದರ್ಶಿ ಆದಿತ್ಯ, ಚಂದ್ರ, ಆಕಾಶ್, ಜ್ಞಾನೇಶ್, ಮೇರಿ, ನೀಮ, ಕಾವೇರಿ ಎ, ದಿವ್ಯಶ್ರೀ ಹಾಗೂ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.





