ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಅನ್ನದಾತ ಕಂಗಾಲಾಗಿದ್ದಾನೆ. ಇದರ ಮಧ್ಯೆ ವ್ಯಾಪಾರಿಗಳು ತೂಕದಲ್ಲಿ ರೈತರಿಗೆ ಮೋಸ ಮಾಡಿ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ವರ್ತಕರು ಇನ್ನುಮುಂದೆ ಚೀಟಿ ವ್ಯವಹಾರ ರದ್ದುಪಡಿಸಿ ರೈತರ ಬೆಳೆಗಳನ್ನು ಟೆಂಡರ್ ಮೂಲಕ ಖರೀದಿಸಬೇಕು ಎಂದು ರೈತ ಸಂಘ ಆಗ್ರಹಿಸಿ ಇಟಗಿ ಉಪ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಸರ್ಕಾರದ ಆದೇಶದಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ 1966 ಕಾಯ್ದೆ 80(1)ರನ್ವಯ ಕೃಷಿ ಉತ್ಪನ್ನಗಳಿಗೆ ಯಾವುದೇ ಮಾರುಕಟ್ಟೆಯ ಕಾರ್ಯನಿರ್ವಾಹಕರು ಮತ್ತು ಇತರೆ ವ್ಯಕ್ತಿಗಳು ತೂಕ ಅಥವಾ ಪಾವತಿ ಹಾಗೂ ಇತರೆ ಭತ್ಯೆಗಳಲ್ಲಿ ಯಾವುದೇ ಕಡಿತಗಳನ್ನು ಸ್ವೀಕರಿಸಲು ಹಾಗೂ ಮರುಪಡೆಯಲು ಅನುಮತಿಸುವುದಿಲ್ಲ. ಆದರೆ, ಹೂವಿನಹಡಗಲಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರು ರೈತರಿಂದ ಬೆಳೆ ಖರೀದಿಸುವ ಸಂದರ್ಭದಲ್ಲಿ ಕ್ವಿಂಟಲ್‌ಗೆ 3 ಕೆಜಿಯಿಂದ 5 ಕೆಜಿವರೆಗೆ ಧಾನ್ಯಗಳನ್ನು ಕಡಿತ ಮಾಡಿಕೊಳ್ಳುತ್ತಿರುವುದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ.
ಪ್ರತಿಯೊಂದು ವ್ಯಾಪಾರಿಯ ಹತ್ತಿರ ಅಳತೆ ಮಾಪನ ಸೂಕ್ತವಾಗಿರಬೇಕು. ಬಾಜಿ ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು. ತೂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಅವರ ಪರವಾನಿಗೆಯನ್ನು ರದ್ದು ಪಡಿಸಲು ಕ್ರಮಕೈಗೊಳ್ಳಬೇಕು ಎಂದು ಸಂಘದ ಮುಖಂಡರು ಆಗ್ರಸಿದರು.
ಇದನ್ನೂ ಓದಿ: ವಿಜಯನಗರ | ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಮಾಡಿ ದೌರ್ಜನ್ಯಕ್ಕೆ ಒಳಗಾಗುವಂತಾಗಿದೆ: ಚಿನ್ನಸ್ವಾಮಿ ಸೋಸಲೆ
“ಈರುಳ್ಳಿ, ರಾಗಿ, ಭತ್ತ, ಹತ್ತಿ, ಶೆಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು. ಬೆಂಬಲ ಬೆಲೆ ನಿಗದಿಗೊಳಿಸಬೇಕು. ತಾಲೂಕಿನಲ್ಲಿ ಈ ನಿಯಮಾವಳಿಗಳನ್ನು ರೈತರಿಗೆ ಪೂರಕವಾಗಿ ಜಾರಿಗೊಳಿಸಬೇಕು” ಎಂದು ರೈತ ಸಂಘದ ಅಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯ ದರ್ಶಿ ಶಿವರಾಜ, ಮಂಜುನಾಥ, ಚನ್ನಬಸಪ್ಪ ಇತರರು ಒತ್ತಾಯಿಸಿದರು.





