ಯುವರಂಗ 2025 ಉಚಿತ ನಾಟಕ ತರಬೇತಿಯ ಶಿಬಿರಾರ್ಥಿಗಳು ಅಭಿನಯಿಸುತ್ತಿರುವ ದೇವದಾಸಿ ಪದ್ಧತಿಯ ವಿಮೋಚನೆಯ ಕುರಿತಾದ ಶಿಕ್ಷಣದ ಮಹತ್ವವನ್ನು ಸಾರುವ ‘ನೀಲಿ ಹೂವು’ ನಾಟಕ ಡಾ.ಸಹನಾ ಪಿಂಜಾರ ಅವರ ನಿರ್ದೇಶನದಲ್ಲಿ ಪ್ರದರ್ಶನವಾಯಿತು.
ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಟಿಎಮ್‌ಎಇಎಸ್ ಆಯುರ್ವೇದಿಕ್ ಕಾಲೇಜಿನಲ್ಲಿ ಸ್ನೇಹ ಭಾರತಿ ಹಳೇ ವಿದ್ಯಾರ್ಥಿನಿಯರ ಸಂಘ ಹಾಗೂ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಬಹುತ್ವ ಪ್ರತಿಷ್ಠಾನ ಸಹಯೋಗದೊಂದಿಗೆ ‘ನೀಲಿ ಹೂವು’ ನಾಟಕ ಪ್ರದರ್ಶನ ಪ್ರದರ್ಶನವಾಯಿತು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ ರಚನೆಯ ದೇವದಾಸಿ ವಿಮೋಚನೆಯ ‘ನೀಲಿ ಹೂವು’ ನಾಟಕವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ಸಹನಾ ಪಿಂಜಾರ ಅವರ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿತು.

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಬಹುತ್ವ ಪ್ರತಿಷ್ಠಾನದ ಸಹಯೋಗದೊಂದಿಗೆ ಒಂದೂವರೆ ತಿಂಗಳುಗಳ ಕಾಲ ರಾಜ್ಯದ ಬೇರೆಬೇರೆ ಜಿಲ್ಲೆಯ 40ಕ್ಕೂ ಹೆಚ್ಚು ಕಲಾಸಕ್ತರು ಶಿಬಿರದಲ್ಲಿ ಭಾಗವಹಿಸಿ ನಾಟಕ ತರಬೇತಿ ಪಡೆದುಕೊಂಡಿದ್ದಾರೆ.
ಇತ್ತಿಚೆಗೆ ಸಮಾಜ ಕಲ್ಯಾಣ ಇಲಾಖೆಯ ‘ಪ್ರಬುದ್ಧ’ ಯೋಜನೆಯಡಿ ಇಂಗ್ಲೆಂಡಗೆ ಪಿಎಚ್‌ಡಿ ಪಡೆಯಲು ತೆರಳುತ್ತಿರುವ ಹೊಸಪೇಟೆಯ ಮಾಜಿ ದೇವದಾಸಿ ಮಗಳು ಕಾಮಾಕ್ಷಿಯ ಬದುಕಿನ ಎಳೆಹಿಡಿದು, ದೇವದಾಸಿ ಕುಟುಂಬದ ಯುವತಿ ಶಿಕ್ಷಣ ಪಡೆದು ಹೇಗೆ ಉನ್ನತ ಸ್ಥಾನಕ್ಕೇರುತ್ತಾಳೆ ಎಂದು ಆಧರಿಸಿದ ಕಥೆಯಾಗಿದೆ.

ನಾಟಕದ ಮೂಲಕ ಶಿಕ್ಷಣದ ಮಹತ್ವ, ದೇವದಾಸಿ ಪದ್ಧತಿಯಿಂದ ಮಹಿಳೆ ಮೇಲಾಗುವ ಶೋಷಣೆ, ಅವಳ ಹಕ್ಕುಗಳು, ಸಾಮಾಜಿಕ ನ್ಯಾಯದ ಅರಿವು ಹಾಗೂ ಜಾಗೃತಿ ಮೂಡಿಸುವ ನಾಟಕವಾಗಿದೆ. ಪ್ರತಿಯೊಂದು ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು, ಶಿಕ್ಷಣ ಎಲ್ಲದಕ್ಕೂ ದೊಡ್ಡ ಶಕ್ತಿಯಾಗಿದೆ ಎಂಬ ಸಂದೇಶವನ್ನು ಸಾರುವ ನಾಟಕ, ದೇವದಾಸಿ ಪದ್ಧತಿ ವಿಮೋಚನೆಗೆ ಶಿಕ್ಷಣವೊಂದೆ ಅಸ್ತ್ರ ಎಂಬಂತ ಮಹತ್ವದ ಸಂದೇಶವನ್ನೂ ನೀಡುವುದು ನಾಟಕದ ಉದ್ದೇಶವಾಗಿತ್ತು.


ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಸ್ತೆ ಗುಂಡಿ ಮುಚ್ಚಿ ಅಪಘಾತ ತಪ್ಪಿಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ
ತಲತಲಾಂತರದಿಂದ ದೇಶದಲ್ಲಿ ದೇವದಾಸಿ ಮಹಿಳೆಯರ ಶೋಷಣೆ ಪದ್ದತಿ ದಲಿತ ಮಹಿಳೆಯರನ್ನು ಶೋಷಿಸುತ್ತ ಬಂದಿದೆ. ಆ ಶೋಷಣೆಯಿಂದ ದೇವದಾಸಿಯಾದ ಸಾವಿತ್ರಮ್ಮ ತನ್ನ ಮೊಮ್ಮಕಳನ್ನು ದೇವದಾಸಿ ಆಚರಣೆಯಿಂದ ವಿಮುಕ್ತಗೊಳಿಸುವುದರ ಕುರಿತು ರಚಿತವಾದ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. 20ಕ್ಕೂ ಹೆಚ್ಚು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

ಶಿಬಿರದ ಸಂಚಾಲಕ ರಿಯಾಜ್ ಸಿಹಿಮೊಗೆ ಮಾತನಾಡಿ, “ಶಿಬಿರದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ‘ನೀಲಿ ಹೂ’ ನಾಟಕ ಇದು ದೇವದಾಸಿಯರ ಬದುಕು-ಬವಣೆ, ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ತಾರತಮ್ಯದ ಕುರಿತು ಶಿವನಾಯಕ್ ದೊರೆ ರಚಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿಯೂ ಈ ಥರದ ನಾಟಕ ಪ್ರಸ್ತುತ ಅನಿಸುತ್ತದೆ. ಹಾಗಾಗಿ ಆಯ್ಕೆ ಮಾಡಿಕೊಂಡು ಪ್ರದರ್ಶನ ಮಾಡುತ್ತಿದ್ದೆವೆ ಮತ್ತು ಈ ನಾಟಕ ಪ್ರಥಮ ಪ್ರದರ್ಶನ ನಡೆದಿದೆ” ಎಂದು ಹೇಳಿದರು.





