ಉನ್ನಾಂವ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆಯನ್ನು ಅಮಾನತಿನಲಿಟ್ಟ ದೆಹಲಿ ಹೈಕೋರ್ಟ್‌ನ ನಿರ್ಧಾರಕ್ಕೆ ಎಐಡಿಎಸ್ಒ ವಿಜಯನಗರ ಜಿಲ್ಲಾ ಸಮಿತಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ವಿಜಯನಗರ ಜಿಲ್ಲಾ ಕಾರ್ಯದರ್ಶಿ ಉಮಾದೇವಿ ಯು ಪತ್ರಿಕೆ ಹೇಳಿಕೆ ನೀಡಿದ್ದು, “ಈ ತೀರ್ಪು ಕೇವಲ ಕಾನೂನಿನ ಹಿನ್ನಡೆಯಲ್ಲ, ಇದು ನ್ಯಾಯದ ಸಂಪೂರ್ಣ ಅಪಹಾಸ್ಯವಾಗಿದೆ. ಕಾನೂನಿನ ಆಳ್ವಿಕೆ ಮತ್ತು ಮಹಿಳೆಯರ ಸುರಕ್ಷತೆಯನ್ನು ನಂಬುವ ಪ್ರತಿಯೊಬ್ಬ ನಾಗರಿಕನ ಆತ್ಮಸಾಕ್ಷಿಯನ್ನು ಇದು ಬೆಚ್ಚಿಬೀಳಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕುಲದೀಪ್ ಸಿಂಗ್ ಸೆಂಗಾರ್ ಸಾಮಾನ್ಯ ಅಪರಾಧಿಯಲ್ಲ, ಉನ್ನಾಂವ್‌ನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ವಿಚಾರಣಾ ನ್ಯಾಯಾಲಯದಿಂದ ಆತ ದೋಷಿ ಎಂಬ ಸಾಬೀತಾದ ವ್ಯಕ್ತಿ. ಅಷ್ಟೇ ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಭಯಾನಕ ಸರಣಿ ಘಟನೆಗಳಲ್ಲಿ ಸಂತ್ರಸ್ತೆಯ ತಂದೆಯ ಕಸ್ಟಡಿಯಲ್ಲಿ ಸಾವು, ಸಂತ್ರಸ್ತೆ ಹಾಗೂ ಆಕೆಯ ಕುಟುಂಬವನ್ನು ಮಟ್ಟಹಾಕಲು ಸಂಚು ರೂಪಿಸಿದ ಸಂಶಯಾಸ್ಪದ ರಸ್ತೆ ʼಅಪಘಾತʼವೂ ಸೇರಿದೆ. ಇಂತಹ ಕ್ರೂರ ಅಪರಾಧಿಗೆ, ಆತ ʼಸಾರ್ವಜನಿಕ ಸೇವಕʼ ಎಂಬ ತಾಂತ್ರಿಕ ಕಾರಣ ನೀಡಿ ಅಪೀಲು ಬಾಕಿ ಇರುವಾಗಲೇ ಜಾಮೀನು ನೀಡಿರುವುದು ಸಂತ್ರಸ್ತೆಯ ದಶಕದ ಸುದೀರ್ಘ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸೆಂಗಾರ್‌ನಂತಹ ಅತ್ಯಾಚಾರಿಯನ್ನು ಮುಕ್ತವಾಗಿ ತಿರುಗಾಡಲು ಬಿಡುವ ಮೂಲಕ ನ್ಯಾಯಾಂಗವು ಒಂದು ಭಯಾನಕ ಸಂದೇಶವನ್ನು ರವಾನಿಸಿದೆ. ಅದೇನೆಂದರೆ, ರಾಜಕೀಯ ಬಲ ಮತ್ತು ಹಣದ ಶಕ್ತಿ ಅತ್ಯಂತ ಘೋರ ಅಪರಾಧಗಳನ್ನೂ ಮೀರಿಸಬಲ್ಲದು ಎಂಬುದು ಸಾಬೀತಾಗಿದೆ. ಪ್ರಭಾವಿ ನರಭಕ್ಷಕನಿಗೆ ನ್ಯಾಯಾಂಗದ ಸಹಾನುಭೂತಿ ಸಿಗುತ್ತಿರುವಂತಹ ದುರಂತ ಕಾಲಘಟ್ಟಗಳಲ್ಲಿ ನಾವಿದ್ದೇವೆ. ಸಂತ್ರಸ್ತೆ ತನ್ನದೇ ಆದ ಆಘಾತ ಮತ್ತು ಭಯದ ಸೆರೆಯಲ್ಲೇ ಇರುವಾಗ, ದೇಶಾದ್ಯಂತ ಇರುವ ಅತ್ಯಾಚಾರ ಸಂತ್ರಸ್ತರಿಗೆ ಈ ವ್ಯವಸ್ಥೆಯ ಮೇಲೆ ಏನಾದರೂ ಭರವಸೆ ಉಳಿಯಲು ಸಾಧ್ಯವೇ?” ಎಂದು ಆತಂಕ ವ್ಯಕ್ತಪಡಿಸಿತು.
ಈ ಸುದ್ದಿ ಓದಿದ್ದೀರಾ? ಉನ್ನಾಂವ್ ಅತ್ಯಾಚಾರ ಕಾಂಡ: ಕುಲದೀಪ್ ಸೆಂಗರ್ ಶಿಕ್ಷೆ ಅಮಾನತಿಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ
“ದೆಹಲಿ ಪೊಲೀಸರು ಉನ್ನಾಂವ್ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ನಡೆಸಿಕೊಂಡ ನಾಚಿಕೆಗೇಡಿನ ಹಾಗೂ ನಿರಂಕುಶ ವರ್ತನೆ, ಡಿಸೆಂಬರ್ 23ರಂದು ಜಾಮೀನು ಆದೇಶದ ವಿರುದ್ಧ ಇಂಡಿಯಾ ಗೇಟ್‌ನಲ್ಲಿ ತಾಯಿ ಮತ್ತು ಮಗಳು ಶಾಂತಿಯುತವಾಗಿ ಪ್ರತಿಭಟಿಸಲು ಪ್ರಯತ್ನಿಸಿದಾಗ, ಪೊಲೀಸರು ಅವರನ್ನು ಎಳೆದಾಡಿ, ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ. ಸಾಮೂಹಿಕ ಅತ್ಯಾಚಾರ ಮತ್ತು ಸರ್ಕಾರಿ ಪ್ರಾಯೋಜಿತ ಬೆದರಿಕೆಗೆ ಒಳಗಾದ ಸಂತ್ರಸ್ತೆಯೊಬ್ಬರು ನ್ಯಾಯ ಕೇಳಿದಾಗ ಅವರಿಗೆ ಪೊಲೀಸರ ಬೂಟು ಮತ್ತು ಲಾಠಿಗಳೇ ಉತ್ತರವಾಗಿವೆ. ಈ ವರ್ತನೆಯು ಪ್ರಜಾಪ್ರಭುತ್ವ ವಿರೋಧಿ, ಅಮಾನವೀಯ ಮತ್ತು ರಾಜ್ಯ ಯಂತ್ರವು ದುರ್ಬಲರಿಗಿಂತ ಪ್ರಭಾವಿಗಳನ್ನು ರಕ್ಷಿಸುವುದರಲ್ಲೇ ಹೆಚ್ಚಿನ ಆಸಕ್ತಿ ಹೊಂದಿದೆ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿತು.
“ಸಮಾಜದ ಈ ಅಧಃಪತನಕ್ಕೆ ನಾವು ಮೂಕಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಮಾನವೀಯತೆಯನ್ನು ಉಳಿಸಲು ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರು ಒಗ್ಗೂಡಿ ರಾಷ್ಟ್ರವ್ಯಾಪಿ ಚಳವಳಿ ರೂಪಿಸಬೇಕು” ಎಂದು ಕರೆ ನೀಡಿದರು.





