ಅಂತರ್‌ಜಾತಿ ವಿವಾಹವಾಗಿದ್ದರು ಎಂಬ ಕಾರಣಕ್ಕೆ 9 ತಿಂಗಳ ಗರ್ಭಿಣಿಯನ್ನು ಹತ್ಯೆಗೈದಿದ್ದ ಆಕೆಯ ಕುಟುಂಬದ ಇಬ್ಬರಿಗೆ ಮರಣದಂಡನೆ ಮತ್ತು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ವಿಜಯಪುರ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪುನ್ನು ಹೈಕೋರ್ಟ್‌ನ ಕಲಬುರಗಿ ಪೀಠ ಎತ್ತಿಹಿಡಿದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕಲ್ ಗ್ರಾಮದಲ್ಲಿ ಮೃತ ಭಾನು ಬೇಗಂ ಮತ್ತು ಎಸ್‌ಟಿ ಸಮುದಾಯದ ಸಾಯಿಬಣ್ಣ ಇಬ್ಬರೂ ಪರಸ್ಪರ ಪ್ರೀತಿ 2017ರಲ್ಲಿ ವಿವಾಹವಾಗಿದ್ದರು. ದಂಪತಿಗಳು ಅದೇ ಗ್ರಾಮದಲ್ಲಿ ವಾಸವಾಗಿದ್ದರು. ಭಾನು ಬೇಗಂ 9 ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಯನ್ನು ಆಕೆಯ ತಾಯಿ, ಸಹೋದರರು ಹಾಗೂ ಸಂಬಂಧಿಗಳು ಬೆಂಕಿ ಹಚ್ಚಿ ಕೊಂದಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಬಸವನಬಾಗೇವಾಡಿ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಜಯಪುರ ಜಿಲ್ಲಾ ನ್ಯಾಯಾಲಯವು ಭಾನು ಬೇಗಂ ಅವರ ಅವರ ಸಹೋದರರಾದ ಇಬ್ರಾಹಿಂ ಸಾಬ್ ಮಹಮ್ಮದ್‌ಸಾಬ್ ಅತ್ತರ್ (31) ಮತ್ತು ಅಕ್ಬರ್ ಮಹಮ್ಮದ್‌ಸಾಬ್ ಅತ್ತರ್‌ಗೆ (28) ಮರಣದಂಡನೆ ಹಾಗೂ ತಾಯಿ ರಂಜಾನ್‌ಬಿ ಅತ್ತರ್, ಸಂಬಂಧಿಕರಾದ ದಾವಲ್‌ಬಿ ಬಂದೇನವಾಝ್ ಜಮಾದಾರ್, ಅಜ್ಮಾ ಜೀಲಾನಿ ದಖನಿ, ಅಬ್ದುಲ್ ಖಾದರ್ ದಖನಿ ಮತ್ತು ದಾವಲ್‌ಬಿ ಸುಬ್ಹಾನ್ ದಣ್ಣೂರ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
ನ್ಯಾಯಾಲಯದ ತೀರ್ಪುನ್ನು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಹೆಚ್.ಪಿ ಸಂದೇಶ್ ಮತ್ತು ಟಿ.ಎಂ ನದಾಫ್ ಅವರ ದ್ವಿಸದಸ್ಯ ಪೀಠವು ವಿಜಯಪುರ ನ್ಯಾಯಾಲಯ ತೀರ್ಪನ್ನು ಎತ್ತಿಹಿಡಿದಿದೆ.




